ಬಂಟ್ವಾಳ: ಬಂಟ್ವಾಳ ತಾಲೂಕಿನ ಕುಕ್ಕಿಪಾಡಿ ಗ್ರಾಮದ ಕೆಂತಲೆ ಎಂಬಲ್ಲಿ ಭಾನುವಾರ ರಾತ್ರಿ ದುರಂತವೊಂದು ಸಂಭವಿಸಿದ್ದು, ಮನೆಯೊಳಗೆ ಆಟವಾಡುತ್ತಿದ್ದ 9 ವರ್ಷದ ಬಾಲಕನೊಬ್ಬ ಕುತ್ತಿಗೆಗೆ ಆಕಸ್ಮಿಕವಾಗಿ ಹಗ್ಗ ಸಿಲುಕಿ ಉಸಿರುಗಟ್ಟಿ ಮೃತಪಟ್ಟಿದ್ದಾನೆ. ಕುಕ್ಕಿಪಾಡಿಯ ಹೋಟೆಲ್ ಕಾರ್ಮಿಕ ಆನಂದ ಪೂಜಾರಿ ಎಂಬುವರ ಪುತ್ರ ಅಮೃತ್ ಎ.ಪೂಜಾರಿ ಮೃತಪಟ್ಟ ದುರದೃಷ್ಟಕರ ಬಾಲಕ.
ಭಾನುವಾರ ರಾತ್ರಿ 9 ಗಂಟೆಯ ಸುಮಾರಿಗೆ ಮನೆಯ ಕಿಟಕಿಯ ಬಳಿ ಬಾಲಕ ಅಮೃತ್ ಒಬ್ಬನೇ ಆಟವಾಡುತ್ತಿದ್ದ. ಆ ಸಮಯದಲ್ಲಿ ತಾಯಿ ಮತ್ತು ಸಹೋದರಿ ಅಡುಗೆ ಕೋಣೆಯಲ್ಲಿ ಕೆಲಸದಲ್ಲಿದ್ದರು. ಕಿಟಕಿಗೆ ಕಟ್ಟಲಾಗಿದ್ದ ಸ್ಕಿಪ್ಪಿಂಗ್ ಹಗ್ಗ ಆಕಸ್ಮಿಕವಾಗಿ ಬಾಲಕನ ಕುತ್ತಿಗೆಗೆ ಬಿಗಿದುಕೊಂಡಿದ್ದು, ಇದನ್ನು ಗಮನಿಸಿದ ತಾಯಿ ತಕ್ಷಣವೇ ಕೂಗಾಡಿದ್ದಾರೆ.
ತಾಯಿಯ ಕಿರುಚಾಟ ಕೇಳಿ ಪಕ್ಕದ ಮನೆಯಲ್ಲಿದ್ದ ಆನಂದ ಪೂಜಾರಿ ಅವರ ಸಹೋದರ ಜಯಾನಂದ ಹಾಗೂ ಸ್ಥಳೀಯರು ಧಾವಿಸಿ ಬಂದು, ತಕ್ಷಣವೇ ಬಾಲಕನನ್ನು ಮೂಡುಬಿದಿರೆಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಪರೀಕ್ಷಿಸಿದ ವೈದ್ಯರು ಬಾಲಕ ಆಸ್ಪತ್ರೆಗೆ ತಲುಪುವಷ್ಟರಲ್ಲೇ ಕೊನೆಯುಸಿರೆಳೆದಿದ್ದಾನೆ ಎಂದು ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಜಯಾನಂದ ನೀಡಿದ ದೂರಿನನ್ವಯ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









