ಉಜಿರೆ : ಧರ್ಮಸ್ಥಳದ ಭವ್ಯ ಇತಿಹಾಸ ಮತ್ತು ಪರಂಪರೆಗೆ ತಕ್ಕಂತೆ ಅನ್ನ, ವಿದ್ಯೆ, ಅಭಯ ಹಾಗೂ ಔಷಧ ಎಂಬ ಚತುರ್ವಿಧ ದಾನಗಳನ್ನು ನಿಸ್ವಾರ್ಥ ಭಾವದಿಂದ ಬೆಳೆಸಿಕೊಂಡು ಬರುತ್ತಿರುವ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ 59ನೇ ವರ್ಧಂತ್ಯುತ್ಸವವು ಮಹೋತ್ಸವ ಸಭಾಭವನದಲ್ಲಿ ಶನಿವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಾಶಂಸನೆ ಗೈದ ಕರ್ಣಾಟಕ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿ.ಇ.ಒ. ರಾಘವೇಂದ್ರ ಶ್ರೀನಿವಾಸ ಭಟ್ ಅವರು, ಹೆಗ್ಗಡೆಯವರ ಸಾತ್ವಿಕ ತ್ಯಾಗ ಹಾಗೂ ಸಮಾಜಮುಖಿ ಸಾಧನೆಗಳು ವಿಶ್ವಮಟ್ಟದಲ್ಲಿ ಮಾದರಿಯಾಗಿವೆ ಎಂದು ಬಣ್ಣಿಸಿದರು.
ಧರ್ಮದ ತಳಹದಿಯಲ್ಲಿ ಸಮಾಜ ಕಲ್ಯಾಣ, ಮಹಿಳಾ ಸಬಲೀಕರಣ ಹಾಗೂ ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸುತ್ತಿರುವ ಹೆಗ್ಗಡೆಯವರಿಗೆ ‘ರಾಜರ್ಷಿ’ ಎಂಬ ಬಿರುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ರಾಘವೇಂದ್ರ ಭಟ್ ಅವರು ಅಭಿಪ್ರಾಯಪಟ್ಟರು. ಇದೇ ವೇಳೆ ಕರ್ಣಾಟಕ ಬ್ಯಾಂಕ್ ಮತ್ತು ಧರ್ಮಸ್ಥಳದ ನಡುವಿನ ಸುದೀರ್ಘ ಅವಿನಾಭಾವ ಸಂಬಂಧವನ್ನು ಸ್ಮರಿಸಿದ ಅವರು, ಬ್ಯಾಂಕ್ನ ನಿರ್ದೇಶಕರಾಗಿ ಸಂಸ್ಥೆಯ ಪ್ರಗತಿಗೆ ಹೆಗ್ಗಡೆಯವರು ಹಾಗೂ ಅವರ ಸಹೋದರರಾದ ಡಿ. ಸುರೇಂದ್ರ ಕುಮಾರ್ ಮತ್ತು ಡಿ. ಹರ್ಷೇಂದ್ರ ಕುಮಾರ್ ನೀಡಿರುವ ಪ್ರೋತ್ಸಾಹವನ್ನು ಕೃತಜ್ಞತೆಯಿಂದ ನೆನಪಿಸಿಕೊಂಡರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಅವರು, ರಾಜಯೋಗಿಯಂತೆ ಸಮಾಜ ಸೇವೆ ಸಲ್ಲಿಸುತ್ತಿರುವ ಹೆಗ್ಗಡೆಯವರ ಉಪಕಾರಸ್ಮರಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಸಭೆಯಲ್ಲಿ ಧರ್ಮಾಧಿಕಾರಿ ಹೆಗ್ಗಡೆಯವರು ಕ್ಷೇತ್ರ ಹಾಗೂ ಶಿಕ್ಷಣ ಸಂಸ್ಥೆಗಳ ವತಿಯಿಂದ ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿರುವ ಹಲವು ಹೊಸ ಬೃಹತ್ ಯೋಜನೆಗಳನ್ನು ಪ್ರಕಟಿಸಿದರು. ಉಜಿರೆಯಲ್ಲಿ ನರ್ಸಿಂಗ್, ಫಿಸಿಯೋಥೆರಪಿ ಕಾಲೇಜುಗಳು, ವಿದ್ಯಾರ್ಥಿನಿಯರಿಗೆ ಕ್ರೀಡಾ ವಸತಿ ನಿಲಯ, ಸಿಂಥೆಟಿಕ್ ಟ್ರ್ಯಾಕ್ ಹಾಗೂ ಆಸ್ಪತ್ರೆಯಲ್ಲಿ ಉಚಿತ ಡಯಾಲಿಸಿಸ್ ಸೇವೆ ಆರಂಭಗೊಳ್ಳಲಿದೆ. ಇದರ ಜೊತೆಗೆ ಬೆಂಗಳೂರಿನ ನಾರಾಯಣ ಹೆಲ್ತ್ ಸಹಯೋಗದಲ್ಲಿ ₹11 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ‘ಕ್ಯಾಥ್ ಲ್ಯಾಬ್’ ಸ್ಥಾಪಿಸಲಾಗುತ್ತಿದ್ದು, ಆಂಜಿಯೋಗ್ರಾಮ್ ಮತ್ತು ಆಂಜಿಯೋಪ್ಲಾಸ್ಟಿ ಚಿಕಿತ್ಸೆಗಳು ಸ್ಥಳೀಯವಾಗಿಯೇ ದೊರೆಯಲಿವೆ. ಅಲ್ಲದೆ ಶ್ರವಣಬೆಳಗೊಳದಲ್ಲಿ ವಿದ್ಯಾರ್ಥಿನಿ ನಿಲಯ, ಶಿಕ್ಷಣ ಸಂಸ್ಥೆಗಳ ಪುನರುಜ್ಜೀವನ, ಕೆರೆಗಳ ಅಭಿವೃದ್ಧಿ ಹಾಗೂ ಎಸ್ಕೆಡಿಆರ್ಡಿಪಿ ಫಲಾನುಭವಿಗಳಿಗೆ ಎಟಿಎಂ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ತಿಳಿಸಿದರು.
ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ಪಾರಂಪರಿಕ ವೈದ್ಯಪದ್ಧತಿಯ ಪ್ರಾಮುಖ್ಯತೆಯನ್ನು ಒತ್ತಿಹೇಳಿದ ಹೆಗ್ಗಡೆಯವರು, ಉಡುಪಿ, ಹಾಸನ, ಬೆಂಗಳೂರಿನ ಆಯುರ್ವೇದ ಆಸ್ಪತ್ರೆಗಳು ಹಾಗೂ ಧರ್ಮಸ್ಥಳ, ಪರೀಕ, ಬೆಂಗಳೂರಿನ ಪ್ರಕೃತಿ ಚಿಕಿತ್ಸಾಲಯಗಳಲ್ಲಿ ಸಾಂಪ್ರದಾಯಿಕ ಚಿಕಿತ್ಸೆಗೆ ಆದ್ಯತೆ ನೀಡಲಾಗುತ್ತಿದೆ ಎಂದರು. ಭಾನುವಾರ ಮತ್ತು ಸೋಮವಾರದಂದು ಧರ್ಮಸ್ಥಳಕ್ಕೆ ಬಂದು ವೈದ್ಯಕೀಯ ಸಹಾಯ ಕೋರುವ ಬಡ ರೋಗಿಗಳಿಗೆ ಸೂಕ್ತ ನೆರವು ಕಲ್ಪಿಸಲಾಗುವುದು ಎಂದು ಅವರು ಅಭಯ ನೀಡಿದರು. ಇದೇ ಸಂದರ್ಭದಲ್ಲಿ ಡಾ. ಪವನ್ ಅವರು ರಚಿಸಿದ “ಮುಹೂರ್ತ ಪದವೀ” ಎಂಬ ಕೃತಿಯನ್ನು ಅನಾವರಣಗೊಳಿಸಲಾಯಿತು.
ಈ ಶುಭ ಸಮಾರಂಭದಲ್ಲಿ ಹೊಸನೆಲ ಎಸ್ಟೇಟ್ನ ಪ್ರಬಂಧಕ ಶ್ರೀವರ್ಮ ಸೇರಿದಂತೆ ಒಟ್ಟು 26 ಹಿರಿಯ ಸಿಬ್ಬಂದಿ ಹಾಗೂ ನೌಕರರನ್ನು ಗೌರವಿಸಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಮಾತೃಶ್ರೀ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಡಿ. ಶ್ರೇಯಸ್ ಕುಮಾರ್ ಹಾಗೂ ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಉಪಸ್ಥಿತರಿದ್ದರು. ಎಸ್ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಸತೀಶ್ಚಂದ್ರ ಸ್ವಾಗತಿಸಿ, ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ರಾವ್ ವಂದಿಸಿದರು. ಪದ್ಮಶ್ರೀ ಆರ್. ಜೈನ್ ಮತ್ತು ದಿವ್ಯ ಕಾರ್ಯಕ್ರಮ ನಿರೂಪಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









