ಧರ್ಮಸ್ಥಳ: ಭಗವಂತನ ಕೃಪೆ ಮತ್ತು ಅನುಗ್ರಹಕ್ಕೆ ಪಾತ್ರರಾಗಲು ಭಜನೆ ಅತ್ಯಂತ ಸರಳ ಹಾಗೂ ಸುಲಭವಾದ ಮಾರ್ಗವಾಗಿದೆ. ಶ್ರದ್ಧೆ-ಭಕ್ತಿಯಿಂದ ಭಜನೆ ಮಾಡುವುದರಿಂದ ದೈವ ಸಾಕ್ಷಾತ್ಕಾರ ಸಾಧ್ಯವಾಗಿ, ಮಾನವರಲ್ಲಿ ಸನ್ಮಾರ್ಗ ಮತ್ತು ಉತ್ತಮ ಸಂಸ್ಕಾರ ಮೂಡಿಬರುತ್ತದೆ ಎಂದು ಮೈಸೂರಿನ ಸುತ್ತೂರು ಮಠದ ಪೂಜ್ಯ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 28 ನೇ ಆವೃತ್ತಿಯ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ರಾಗ, ತಾಳ ಹಾಗೂ ಲಯಬದ್ಧವಾಗಿ ಭಜನೆ ಮಾಡುವುದರಿಂದ ಮನಸ್ಸಿನಲ್ಲಿ ಸಾತ್ವಿಕ ಶಕ್ತಿ ಜಾಗೃತವಾಗಿ ನೈತಿಕ ಮತ್ತು ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಹಾದಿಯಾಗುತ್ತದೆ. ಮೀರಾಬಾಯಿಯಂತಹ ಅನೇಕ ಸಾಧು-ಸಂತರು ಹಾಗೂ ಇಸ್ಕಾನ್ ಸಂಸ್ಥೆಯು ಜಗತ್ತಿನಾದ್ಯಂತ ಭಜನೆಯ ಮಹತ್ವವನ್ನು ಪಸರಿಸಿದೆ ಎಂದು ಬಣ್ಣಿಸಿದರು. ಅಲ್ಲದೆ, ಸಮಾಜಮುಖಿ ಕಾರ್ಯಗಳ ಮೂಲಕ ‘ರಾಜರ್ಷಿ’ಯಾಗಿ ಸೇವೆ ಸಲ್ಲಿಸುತ್ತಿರುವ ವೀರೇಂದ್ರ ಹೆಗ್ಗಡೆಯವರ ಕೊಡುಗೆಯನ್ನು ಸ್ಮರಿಸಿದರು.
ಇದೇ ವೇಳೆ ಮಾತನಾಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ, ಸನಾತನ ಸಂಸ್ಕೃತಿಯ ಉಳಿವಿಗೆ ಕೃಷಿ ಹಾಗೂ ಋಷಿ ಪರಂಪರೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆಯನ್ನು ಬಿಟ್ಟು ಧಾರ್ಮಿಕ ಮತ್ತು ನೈತಿಕ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಸ್ವಾಮೀಜಿಯವರು ಸುಶ್ರಾವ್ಯವಾಗಿ ಹಾಡಿದ ಭಜನೆಯು ಪ್ರೇಕ್ಷಕರ ಮನಸೆಳೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಕಮ್ಮಟದಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು ತಮ್ಮ ಊರುಗಳಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ನಾಯಕರಾಗಬೇಕು ಎಂದು ಆಶಿಸಿದರು. ಶಿಬಿರದಲ್ಲಿ ಅತ್ಯುತ್ತಮ ಮಾರ್ಗದರ್ಶನ ನೀಡಿದ ವಿದ್ವಾಂಸರನ್ನು ಹಾಗೂ ಸಂಪನ್ಮೂಲ ವ್ಯಕ್ತಿಗಳನ್ನು ಅವರು ಅಭಿನಂದಿಸಿದರು. ಸಮಾರೋಪದ ಅಂಗವಾಗಿ ಶಿಬಿರಾರ್ಥಿಗಳಿಂದ ಆಕರ್ಷಕ ಸಾಮೂಹಿಕ ನೃತ್ಯ ಭಜನೆ ಹಾಗೂ ಕುಣಿತ ಭಜನೆ ಪ್ರದರ್ಶನಗೊಂಡಿತು.
ಒಂದು ವಾರಗಳ ಕಾಲ ನಡೆದ ಈ ಕಮ್ಮಟದಲ್ಲಿ 107 ಪುರುಷರು ಹಾಗೂ 105 ಮಹಿಳೆಯರು ಸೇರಿದಂತೆ ಒಟ್ಟು 212 ಅಭ್ಯರ್ಥಿಗಳು ಭಾಗವಹಿಸಿದ್ದರು ಎಂದು ಭಜನಾ ಕಮ್ಮಟದ ಕಾರ್ಯದರ್ಶಿ ಎ.ವಿ. ಶೆಟ್ಟಿ ವರದಿ ವಾಚಿಸಿದರು. ಈ ಸಂದರ್ಭದಲ್ಲಿ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಐಶ್ವರ್ಯ ನಿಶ್ಚಲ್ ಕುಮಾರ್, ಮಾಣಿಲದ ಶ್ರೀ ಮೋಹನದಾಸ ಸ್ವಾಮೀಜಿ, ಶಾಸಕ ಹರೀಶ್ ಪೂಂಜ ಹಾಗೂ ಮಾಜಿ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









