ಮಂಗಳೂರು : ಗುಣಮಟ್ಟದ ತಾಯಿ-ಮಗುವಿನ ಆರೋಗ್ಯ ಸೇವೆ ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿರುವ ಮಂಗಳೂರಿನ ಪ್ರತಿಷ್ಠಿತ ದಕ್ಷಿಣ ಕನ್ನಡ ಜಿಲ್ಲಾ ಸರಕಾರಿ ಲೇಡಿಗೋಷನ್ ಆಸ್ಪತ್ರೆಗೆ ರಾಜ್ಯ ಮಟ್ಟದ ಶ್ರೇಷ್ಠ ಗೌರವ ಲಭಿಸಿದೆ. ನೂತನ ವಿಧಾನಗಳು ಹಾಗೂ ಸುಧಾರಿತ ವೈದ್ಯಕೀಯ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಶೂನ್ಯ ತಾಯಿ ಮರಣ ದರ ಸಾಧಿಸಿ, ಆಸ್ಪತ್ರೆಯು ಮತ್ತೊಮ್ಮೆ ತನ್ನ ದಕ್ಷತೆಯನ್ನು ಸಾಬೀತುಪಡಿಸಿದೆ.
ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಐಪಾಸ್ ಫೌಂಡೇಶನ್ ಜಂಟಿಯಾಗಿ ನಡೆಸಿದ ಸರ್ವೆಯ ಪ್ರಕಾರ, 2025-26ರ ಆರ್ಥಿಕ ಸಾಲಿನಲ್ಲಿ ಕಾನೂನುಬದ್ಧ ಗರ್ಭಪಾತ ಮತ್ತು ತದನಂತರದ ಆರೈಕೆಯಲ್ಲಿ ನೂರರಷ್ಟು ಸುರಕ್ಷತೆ ಕಾಯ್ದುಕೊಂಡು ಲೇಡಿಗೋಷನ್ ಆಸ್ಪತ್ರೆಯು ರಾಜ್ಯದಲ್ಲೇ ಮೊದಲ ಸ್ಥಾನ ಗಳಿಸಿದೆ. ಈ ಅವಧಿಯಲ್ಲಿ ಕಾಂಪ್ರೆಹೆನ್ಸಿವ್ ಅಬಾರ್ಶನ್ ಕೇರ್ ಯೋಜನೆಯಡಿ ದಾಖಲಾದ ಒಟ್ಟು 304 ಗರ್ಭಪಾತ ಪ್ರಕರಣಗಳನ್ನು ಯಾವುದೇ ಅನಾಹುತವಿಲ್ಲದೆ ಯಶಸ್ವಿಯಾಗಿ ನಿರ್ವಹಿಸಲಾಗಿದೆ.
ವೈದ್ಯಕೀಯ ಅಂಕಿ-ಅಂಶಗಳ ಪ್ರಕಾರ, 9 ವಾರಗಳ ಒಳಗಿನ 191, 10ರಿಂದ 12 ವಾರಗಳ 31, 12ರಿಂದ 20 ವಾರಗಳ 52, 20ರಿಂದ 24 ವಾರಗಳ 25 ಹಾಗೂ 24 ವಾರ ಮೇಲ್ಪಟ್ಟ 5 ಗರ್ಭಪಾತ ಪ್ರಕರಣಗಳನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸಲಾಗಿದೆ. ಇದರ ಜೊತೆಗೆ, ಶೇಕಡಾ 95ರಷ್ಟು ಫಲಾನುಭವಿಗಳಿಗೆ ಕುಟುಂಬ ಕಲ್ಯಾಣ ಯೋಜನೆಗಳ ಕುರಿತು ಸೂಕ್ತ ಅರಿವು ಮೂಡಿಸಿ, ಅವುಗಳನ್ನು ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದ ಹೆಗ್ಗಳಿಕೆಯೂ ಆಸ್ಪತ್ರೆಗೆ ಸಲ್ಲುತ್ತದೆ.
ಈ ಅಭೂತಪೂರ್ವ ಸಾಧನೆಗೆ ಕಾರಣರಾದ ಕೆ.ಎಂ.ಸಿ. ಆಸ್ಪತ್ರೆಯ ಪ್ರಸೂತಿ, ಸ್ತ್ರೀರೋಗ, ಅರಿವಳಿಕೆ, ರೇಡಿಯೋಡಯೋಗ್ನೋಸಿಸ್ ಮತ್ತು ನವಜಾತ ಶಿಶು ವಿಭಾಗದ ತಜ್ಞ ವೈದ್ಯರು ಹಾಗೂ ಶುಶ್ರೂಷಕ, ತಾಂತ್ರಿಕ ಸಿಬ್ಬಂದಿಗಳನ್ನು ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಎಮ್.ಆರ್. ಅಭಿನಂದಿಸಿದ್ದಾರೆ. ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಲಾದ ವಾಟ್ಸಾಪ್ ಹೈರಿಸ್ಕ್ ಪ್ರೆಗ್ನೆನ್ಸಿ ಟ್ರ್ಯಾಕಿಂಗ್ ಸಿಸ್ಟಮ್ ಹಾಗೂ ಪ್ರಸೂತಿ ತೀವ್ರ ನಿಗಾ ಘಟಕಗಳು ಈ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂದು ಅವರು ತಿಳಿಸಿದ್ದಾರೆ.
ಆಸ್ಪತ್ರೆಯ ಅತ್ಯಾಧುನಿಕ ಜೀವರಕ್ಷಕ ಉಪಕರಣಗಳ ಅಳವಡಿಕೆಗೆ ಸಿ.ಎಸ್.ಆರ್. ನಿಧಿ ನೀಡಿದ ವಿವಿಧ ಸಂಸ್ಥೆಗಳು, ಆರೋಗ್ಯ ಸಚಿವರು, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಸಹಕಾರವನ್ನು ಸ್ಮರಿಸಲಾಗಿದೆ. ಮುಂದಿನ ದಿನಗಳಲ್ಲೂ ತಾಯಂದಿರ ಆರೋಗ್ಯ ರಕ್ಷಣೆಗೆ ನಿರಂತರವಾಗಿ ಶ್ರಮಿಸಿ, ಆಸ್ಪತ್ರೆಯ ಈ ಉನ್ನತ ಸ್ಥಾನಮಾನವನ್ನು ಕಾಯ್ದುಕೊಳ್ಳುವುದಾಗಿ ವೈದ್ಯಕೀಯ ಅಧೀಕ್ಷಕರು ಭರವಸೆ ನೀಡಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









