ಮಂಗಳೂರು : ಮಂಗಳೂರಿನ ಪಂಜಿಮೊಗರು ಮಾಲಾಡಿ ರಸ್ತೆಯ ಎಂ.ವಿ. ಶೆಟ್ಟಿ ಕಾಲೇಜು ಸಮೀಪದ ನಿವಾಸಿ ರಾಕೇಶ್ ಎಂಬ ಯುವಕನನ್ನು ತಲವಾರಿನಿಂದ ಕಡಿದು ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯ ಆರೋಪಿಗಳಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ ನ್ಯಾಯಾಲಯ ಆದೇಶಿಸಿದೆ. ಸುನೀಲ್ ಕುಮಾರ್ ಯಾನೆ ಕೌಟಿ, ಪ್ರವೀಣ್ ಪೂಜಾರಿ ಯಾನೆ ಚೋಟು ಹಾಗೂ ಪ್ರೀತಮ್ ಯಾನೆ ಅಭಿ ಜೀವಾವಧಿ ಶಿಕ್ಷೆಗೆ ಗುರಿಯಾದ ಆರೋಪಿಗಳಾಗಿದ್ದಾರೆ. 2019ರ ಜನವರಿ 3ರಂದು ನಡೆದ ಈ ಕೃತ್ಯದಲ್ಲಿ, ಆರೋಪಿ ಸುನೀಲ್ ಕುಮಾರ್ ಕೌಟಿಯ ತಂಗಿಯನ್ನು ರಾಕೇಶ್ ಪ್ರೀತಿಸುತ್ತಿದ್ದ ಎಂಬ ಕಾರಣಕ್ಕೆ ದ್ವೇಷ ಸಾಧಿಸಿ ಈ ಭೀಕರ ಹತ್ಯೆ ನಡೆಸಲಾಗಿತ್ತು.
ಸದರಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುನೀಲ್ ಕುಮಾರ್ ಕೌಟಿ, ಪ್ರವೀಣ್ ಪೂಜಾರಿ, ಪ್ರೀತಮ್ ಹಾಗೂ ರೋಹಿತ್ ಕುಮಾರ್ ಯಾನೆ ಶೂಟರ್ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಅಂದಿನ ಕಾವೂರು ಪೊಲೀಸ್ ಇನ್ಸ್ಪೆಕ್ಟರ್ ಕೆ.ಆರ್. ನಾಯ್ಕ್ ಅವರು ತನಿಖಾಧಿಕಾರಿಯಾಗಿ ಪ್ರಕರಣದ ಸಮಗ್ರ ತನಿಖೆ ನಡೆಸಿ, ಸಾಕ್ಷ್ಯಾಧಾರಗಳೊಂದಿಗೆ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಸ್ತೃತ ವಿಚಾರಣೆ ನಡೆಸಿದ ನಗರದ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ನಾಲ್ವರು ಆರೋಪಿಗಳನ್ನು ತಪ್ಪಿತಸ್ಥರೆಂದು ನಿರ್ಣಯಿಸಿದೆ.
ನ್ಯಾಯಾಧೀಶರಾದ ರಾಜೇಶ್ ಮಾರುತಿ ಕಮಟೆ ಅವರು ತೀರ್ಪು ಪ್ರಕಟಿಸಿದ್ದು, 1 ರಿಂದ 3 ನೇ ಆರೋಪಿಗಳಿಗೆ ಐಪಿಸಿ ಸೆಕ್ಷನ್ 302, 120(ಬಿ) ಜೊತೆಗೆ 34 ರ ಅಡಿಯಲ್ಲಿ ಜೀವಾವಧಿ ಶಿಕ್ಷೆ ಹಾಗೂ ತಲಾ ₹15,000 ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದರೆ ಹೆಚ್ಚುವರಿ 1 ವರ್ಷ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹಾಗೆಯೇ ಸಾಕ್ಷ್ಯ ನಾಶ (ಐಪಿಸಿ 201) ಹಾಗೂ ಆರೋಪಿಗಳಿಗೆ ಆಶ್ರಯ ನೀಡಿದ (ಐಪಿಸಿ 212) ಆರೋಪದಡಿಯಲ್ಲಿ 1 ರಿಂದ 4 ನೇ ಆರೋಪಿಗಳಿಗೆ ತಲಾ 3 ವರ್ಷಗಳ ಕಾರಾವಾಸ ಮತ್ತು ದಂಡ ವಿಧಿಸಲಾಗಿದೆ.
ಒಟ್ಟು ವಸೂಲಾಗುವ ₹70,000 ದಂಡದ ಮೊತ್ತದಲ್ಲಿ ₹20,000 ವನ್ನು ಸರ್ಕಾರಕ್ಕೆ ಹಾಗೂ ₹50,000 ವನ್ನು ಕೊಲೆಯಾದ ರಾಕೇಶ್ ಅವರ ತಂದೆಗೆ ಪರಿಹಾರವಾಗಿ ನೀಡುವಂತೆ ನ್ಯಾಯಪೀಠ ಆದೇಶಿಸಿದೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಮೋತೀಲಾಲ್ ಚೌದರಿ ಅವರು ನ್ಯಾಯಾಲಯದಲ್ಲಿ ಸಬಲ ವಾದ ಮಂಡಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









