ಉಡುಪಿ : ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ ವ್ಯಕ್ತಿಯೊಬ್ಬರಿಂದ ಲಕ್ಷಾಂತರ ರೂಪಾಯಿ ಹಣ ಪೀಡಿಸಿ, ಬೆದರಿಕೆ ಒಡ್ಡಿ ಬ್ಲಾಕ್ಮೇಲ್ ಮಾಡುತ್ತಿದ್ದ ಆರೋಪದ ಮೇಲೆ ಕನ್ನಡ ಶಿಕ್ಷಕಿ ಸೇರಿದಂತೆ ಇಬ್ಬರನ್ನು ಉಡುಪಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೈಂದೂರು ತಾಲೂಕಿನ ಮಯ್ಯಾಡಿ ಮೂಲದವಳಾಗಿದ್ದು ಪ್ರಸ್ತುತ ಬೆಂಗಳೂರಿನ ಬಸವೇಶ್ವರನಗರದಲ್ಲಿ ವಾಸವಿರುವ ನಾಗರತ್ನ ಹೆಚ್ (42) ಹಾಗೂ ಕಾರ್ಕಳ ಮಿಯಾರು ಮೂಲದ ಹೇಮಂತ್ (41) ಬಂಧಿತ ಆರೋಪಿಗಳಾಗಿದ್ದಾರೆ. ಉಡುಪಿಯ ನಿರ್ಮಾಣ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೌಕರ ಪ್ರದೀಪ್ ಕೆ. ಎಂಬುವವರು ನೀಡಿದ ದೂರಿನ ಆಧಾರದ ಮೇಲೆ ಈ ಬಂಧನ ಕ್ರಮ ಕೈಗೊಳ್ಳಲಾಗಿದೆ.
ದೂರುದಾರ ಪ್ರದೀಪ್ 2024ರ ಜನವರಿಯಲ್ಲಿ ‘ಕನ್ನಡ ಜೋಡಿ ಮ್ಯಾಟ್ರಿಮೋನಿ’ ಆ್ಯಪ್ ಮೂಲಕ ನಾಗರತ್ನಳ ಸಂಪರ್ಕಕ್ಕೆ ಬಂದಿದ್ದರು. ಬೆಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದೇನೆ ಎಂದು ಪರಿಚಯಿಸಿಕೊಂಡಿದ್ದ ನಾಗರತ್ನ, ಮದುವೆಯಾಗುವಂತೆ ಪ್ರದೀಪ್ ಅವರಲ್ಲಿ ಕೋರಿದ್ದಳು. ಆದರೆ ಪ್ರದೀಪ್ ಸ್ವಜಾತಿಯಲ್ಲೇ ವಿವಾಹವಾಗುವುದಾಗಿ ತಿಳಿಸಿ ಈ ಪ್ರಸ್ತಾಪವನ್ನು ನಯವಾಗಿ ನಿರಾಕರಿಸಿದ್ದರು. ತದನಂತರ, ನಾಗರತ್ನ ತನ್ನ ವೈಯಕ್ತಿಕ ಹಾಗೂ ಆರ್ಥಿಕ ಕಷ್ಟಗಳನ್ನು ಹೇಳಿಕೊಂಡು ಆಗಾಗ್ಗೆ ಕರೆ ಹಾಗೂ ಮೆಸೇಜ್ ಮಾಡಿ ಪ್ರದೀಪ್ರಿಂದ ಸಣ್ಣ ಪ್ರಮಾಣದಲ್ಲಿ ಹಣ ಪಡೆಯಲು ಆರಂಭಿಸಿದ್ದಳು. ಕ್ರಮೇಣ ತನ್ನ ಬ್ಯಾಂಕ್ ಖಾತೆ ಹಾಗೂ ಸಹೋದ್ಯೋಗಿ ಹೇಮಂತ್ ಕರ್ಕೇರಾ, ಸಂಬಂಧಿ ಪ್ರಮೋದ್ ಮತ್ತು ಅಕ್ಕ ರೇಣುಕಾ ಅವರ ಖಾತೆಗಳಿಗೆ ಹಂತ ಹಂತವಾಗಿ ಹಣ ಪಡೆದು, ಜನವರಿ 2024 ರಿಂದ ಜನವರಿ 2026 ರವರೆಗಿನ ಅವಧಿಯಲ್ಲಿ ಒಟ್ಟು ₹42,97,350 ಸುಲಿಗೆ ಮಾಡಿದ್ದಳು.
ಪ್ರದೀಪ್ ತಮ್ಮ ಹಣವನ್ನು ವಾಪಸ್ ನೀಡುವಂತೆ ಪಟ್ಟು ಹಿಡಿದಾಗ ನಾಗರತ್ನ ತೀವ್ರ ಸ್ವರೂಪದ ಬ್ಲಾಕ್ಮೇಲಿಂಗ್ಗೆ ಇಳಿದಿದ್ದಳು. ಅಕ್ರಮ ಸಂಬಂಧದ ಸುಳ್ಳು ದೂರು ನೀಡುವುದಾಗಿ, ಉಡುಪಿಯಲ್ಲಿರುವ ಪ್ರದೀಪ್ ಅವರ ಕಚೇರಿಗೆ ಬಂದು ಸಹೋದ್ಯೋಗಿಗಳು ಹಾಗೂ ಗ್ರಾಹಕರ ಎದುರು ಅವಮಾನಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸಿದ್ದಳು. ಅಲ್ಲದೆ, ಕಂಪನಿಯ ಹಣ ದುರುಪಯೋಗಪಡಿಸಿಕೊಂಡು ವಂಚಿಸಿದ್ದಾರೆ ಎಂದು ಪ್ರದೀಪ್ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಳು. ಈ ವಂಚನೆ ಹಾಗೂ ಬೆದರಿಕೆಯಿಂದ ಬೇಸತ್ತ ಪ್ರದೀಪ್ ಉಡುಪಿ ನಗರ ಠಾಣೆಗೆ ದೂರು ನೀಡಿದ್ದರು.
ನಗರ ಪೊಲೀಸ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ಗಳಾದ ಭರತೇಶ್ ಕಂಕಣವಾಡಿ, ರತ್ನಾಕರ್ ಕೆ ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ತಂಡ ಕಾರ್ಯಾಚರಣೆ ನಡೆಸಿ, ಅಕ್ಟೋಬರ್ 26 ರಂದು ಬೆಂಗಳೂರಿನ ಬಸವೇಶ್ವರನಗರ ಮತ್ತು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ನಾಗರತ್ನ ಹಾಗೂ ಹೇಮಂತ್ನನ್ನು ಬಂಧಿಸಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಆರೋಪಿಗಳಾದ ಪ್ರಮೋದ್ ಮತ್ತು ರೇಣುಕಾ ವಿರುದ್ಧವೂ ದೂರು ದಾಖಲಾಗಿದ್ದು ತನಿಖೆ ಮುಂದುವರಿದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









