ಬಂಟ್ವಾಳ : ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ಆಡಳಿತ ವೈಫಲ್ಯವನ್ನು ಖಂಡಿಸಿ ಬಿಜೆಪಿ ಹಮ್ಮಿಕೊಂಡಿರುವ ಜನಾಂದೋಲನ ಕಾರ್ಯಕ್ರಮದ ಭಾಗವಾಗಿ, ಬಂಟ್ವಾಳ ತಾಲೂಕಿನ ಅನಂತಾಡಿ ಶಕ್ತಿಕೇಂದ್ರದ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಲಾಯಿತು. ಕಾಂಗ್ರೆಸ್ ಆಡಳಿತದಲ್ಲಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಸಾರ್ವಜನಿಕರು ಆರ್ಥಿಕ ಕಷ್ಟ ನಷ್ಟಗಳನ್ನು ಅನುಭವಿಸುತ್ತಿದ್ದಾರೆ. ಇದರೊಂದಿಗೆ ಅರ್ಹ ಫಲಾನುಭವಿಗಳಿಗೆ ತಲುಪಬೇಕಿದ್ದ ವಿವಿಧ ಮಾಸಾಶನ ಹಾಗೂ ಪಿಂಚಣಿ ಸೌಲಭ್ಯಗಳು ಏಕಾಏಕಿ ಸ್ಥಗಿತಗೊಂಡಿದ್ದು, ಆಶ್ರಯ ಯೋಜನೆಯಡಿ ಬಡವರಿಗೆ ಮನೆಗಳ ಮಂಜೂರಾತಿಯೂ ಭರವಸೆಗೆ ಸೀಮಿತವಾಗಿದೆ ಎಂದು ಆರೋಪಿಸಿ ಈ ಸುದೀರ್ಘ ಪಾದಯಾತ್ರೆಯನ್ನು ಕೈಗೊಳ್ಳಲಾಯಿತು.
ಅನಂತಾಡಿ ಗ್ರಾಮದ ಗೋಲಿಕಟ್ಟೆಯಿಂದ ಚಾಲನೆ ಪಡೆದ ಈ ಪಾದಯಾತ್ರೆಯು ಪಂಚಾಯತ್ ಆವರಣದವರೆಗೆ ಸಾಗಿ ಬಹಿರಂಗ ಸಭೆಯಾಗಿ ಪರಿವರ್ತನೆಯಾಯಿತು. ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಪಾದಯಾತ್ರೆಯಲ್ಲಿ ಮುಂಚೂಣಿಯಲ್ಲಿ ನಿಂತು ಪಕ್ಷದ ನಾಯಕರು, ಕಾರ್ಯಕರ್ತರು ಹಾಗೂ ಸ್ಥಳೀಯ ಸಾರ್ವಜನಿಕರೊಂದಿಗೆ ಹೆಜ್ಜೆ ಹಾಕಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ವೃದ್ಧಾಪ್ಯ ವೇತನ, ವಿಕಲಚೇತನರ ಭತ್ಯೆ ಸೇರಿದಂತೆ ಸಾಮಾಜಿಕ ಭದ್ರತಾ ಪಿಂಚಣಿಗಳನ್ನೇ ನೆಚ್ಚಿಕೊಂಡಿರುವ ಬಡ ಕುಟುಂಬಗಳಿಗೆ ಸಮಯಕ್ಕೆ ಸರಿಯಾಗಿ ಮಾಸಾಶನ ಸಿಗದಿರುವುದು ತೀವ್ರ ಕಳವಳಕಾರಿ ಸಂಗತಿಯಾಗಿದೆ ಎಂದರು. ಸರ್ಕಾರವು ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯದೆ, ಆಶ್ರಯ ಮನೆ ಮಂಜೂರಾತಿ ಮತ್ತು ಬಾಕಿ ಉಳಿದಿರುವ ಎಲ್ಲಾ ಯೋಜನೆಗಳ ಹಣವನ್ನು ಅರ್ಹ ಫಲಾನುಭವಿಗಳಿಗೆ ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಸಾರ್ವಜನಿಕರ ಮೂಲಭೂತ ಹಕ್ಕುಗಳು ಹಾಗೂ ಸೌಲಭ್ಯಗಳ ರಕ್ಷಣೆಗಾಗಿ ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಈ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್, ಜಿಲ್ಲಾ ಕಾರ್ಯದರ್ಶಿ ದಿನೇಶ್ ಆಮ್ಟೂರು ಉಪಸ್ಥಿತರಿದ್ದರೆ, ರಾಜ್ಯ ನಾಯಕ ವಿಕಾಸ್ ಪುತ್ತೂರು ಅವರು ಪ್ರಧಾನ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಶಕ್ತಿಕೇಂದ್ರ ಪ್ರಮುಖ ಮಹಾಬಲ ಪೂಜಾರಿ, ಬಿಜೆಪಿ ಮಂಡಲ ಕಾರ್ಯದರ್ಶಿ ಸನಾತ್ ಕುಮಾರ್, ಮಾಣಿ ಮಹಾಶಕ್ತಿ ಕೇಂದ್ರ ಅಧ್ಯಕ್ಷ ಅರವಿಂದ್ ರೈ, ಕಾರ್ಯದರ್ಶಿ ನಾಗೇಶ್ ಭಂಡಾರಿ, ಅನಂತಾಡಿ ಪ್ರಭಾರಿ ಲಕಿತ ಶೆಟ್ಟಿ, ನೇರಳಕಟ್ಟೆ ಸೊಸೈಟಿ ಅಧ್ಯಕ್ಷ ಪುಷ್ಪರಾಜ್ ಚೌಟ, ಉಪಾಧ್ಯಕ್ಷರಾದ ತನಿಯಪ್ಪ ಗೌಡ, ಅಶೋಕ್ ರೈ, ನಾಯಕರಾದ ಹರೀಶ್ ಕುಲಾಲ್, ಧನಂಜಯ ಗೌಡ, ನಾರಾಯಣ ಶೆಟ್ಟಿ ಮಾಣಿ, ದೇವಿಪ್ರಸಾದ್ ಬೆಂಜತಿಮಾರ್, ತಾಲೂಕು ಮಾಜಿ ಸದಸ್ಯೆ ಗೀತಾ, ಸುಮಿತ್ರ ಕರ್ಕೇರ, ಪಂಚಾಯತ್ ಸದಸ್ಯರಾದ ಸುಜಾತಾ, ಸಂಧ್ಯಾ ಕುಸುಮದರ್, ಮಹಿಳಾ ಮೋರ್ಚಾದ ಸುಶೀಲಾ, ವನಿತಾ, ಮುಖಂಡರಾದ ರಮೇಶ್ ಗೌಡ, ರಾಮ್ ಪ್ರಸಾದ್ ಕೊಂಬಿಲ, ನಾರಾಯಣ ಶೆಟ್ಟಿ ಪುನ್ಕದಡಿ, ಕಿರಣ್ ಬಂಟ್ರಿಂಜಾ, ಶ್ರೀಧರ್, ಗಂಗಾಧರ್, ನಿತಿನ್, ಉಮೇಶ್ ನಿಡ್ಯಾರ, ಶಿವರಾಮ್ ಶೆಟ್ಟಿ, ರಮೇಶ್ ಗೌಡ ಕೆ., ವಿವೇಕ್, ನವೀನ್ ಶೆಟ್ಟಿ, ಶಶಿಕಾಂತ್ ಹಾಗೂ ಹೇಮಂತ್ ಸೇರಿದಂತೆ ವಿವಿಧ ಬೂತ್ ಸಮಿತಿಗಳ ಪದಾಧಿಕಾರಿಗಳು, ಪಿಂಚಣಿ ವಂಚಿತ ಸಂತ್ರಸ್ತರು ಮತ್ತು ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









