ಮಂಗಳೂರು : ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ರಾಹುಲ್ ರತ್ನಂ ಪಾಂಡೆ ಅವರು ಮಂಗಳವಾರ ನಗರದ ಹಲವು ಪ್ರದೇಶಗಳಿಗೆ ಸ್ಥಳ ಪರಿಶೀಲನೆಗಾಗಿ ಭೇಟಿ ನೀಡಿ, ಸ್ಥಳೀಯ ನಿವಾಸಿಗಳಿಂದ ಸಾರ್ವಜನಿಕ ಕುಂದುಕೊರತೆಗಳನ್ನು ಆಲಿಸಿದರು. ಉಳ್ಳಾಲ ಹೊಯ್ಗೆ ಪ್ರದೇಶಕ್ಕೆ ದೋಣಿಯ ಮೂಲಕ ಪ್ರಯಾಣಿಸಿದ ಆಯುಕ್ತರು, ಅಲ್ಲಿನ ಹಾನಿಗೊಳಗಾದ ಕಾಲುಸೇತುವೆ ಹಾಗೂ ಕುಡಿಯುವ ನೀರಿನ ಸಮಸ್ಯೆಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿದರು. ಈ ವೇಳೆ ಸ್ಥಳೀಯರು ತಮ್ಮ ಪ್ರದೇಶಕ್ಕೆ ಕುಡಿಯುವ ನೀರಿನ ಪೈಪ್ಲೈನ್, ಸುಸಜ್ಜಿತ ರಸ್ತೆ, ಬಸ್ ನಿಲ್ದಾಣ ಹಾಗೂ ಸಾರಿಗೆ ಸೌಕರ್ಯ ಒದಗಿಸುವಂತೆ ಮನವಿ ಸಲ್ಲಿಸಿದರು.
ಮುಂದಿನ ದಿನಗಳಲ್ಲಿ ತೀವ್ರ ಬೇಸಿಗೆ ಹಾಗೂ ಬರಗಾಲದ ಸನ್ನಿವೇಶ ಎದುರಾಗುವ ಸಾಧ್ಯತೆ ಇರುವುದರಿಂದ ಕುಡಿಯುವ ನೀರಿನ ಪೂರೈಕೆಗೆ ಮೊದಲ ಆದ್ಯತೆ ನೀಡಿ ತಕ್ಷಣದ ಕ್ರಮ ಕೈಗೊಳ್ಳಲಾಗುವುದು ಎಂದು ಆಯುಕ್ತರು ನಿವಾಸಿಗಳಿಗೆ ಭರವಸೆ ನೀಡಿದರು. ಪೈಪ್ಲೈನ್ ಅಳವಡಿಕೆ ಕಾಮಗಾರಿಗಾಗಿ ಕನಿಷ್ಠ 50 ಸ್ಥಳೀಯ ನಿವಾಸಿಗಳ ಅಂಕಿತವಿರುವ ಮನವಿ ಪತ್ರವನ್ನು ನವೆಂಬರ್ 4ರೊಳಗೆ ಪಾಲಿಕೆಗೆ ಸಲ್ಲಿಸಲು ಸೂಚಿಸಿದ ಅವರು, ಮುಂದಿನ ವಾರದೊಳಗೆ ಟೆಂಡರ್ ಪ್ರಕ್ರಿಯೆ ಮುಗಿಸಿ ಕಾಮಗಾರಿ ಆರಂಭಿಸಲು ಅಧಿಕಾರಿಗಳಿಗೆ ತುರ್ತು ನಿರ್ದೇಶನ ನೀಡಿದರು.
ಇದಾದ ನಂತರ ಬಜಾಲ್ನಲ್ಲಿ ಮಂಗಳೂರು ಮಹಾನಗರಪಾಲಿಕೆ ಹಾಗೂ ‘ಪ್ಲಾಸ್ಟಿಕ್ ಫಿಶರ್’ ಸ್ವಯಂಸೇವಾ ಸಂಸ್ಥೆಯ ಜಂಟಿ ಸಹಯೋಗದೊಂದಿಗೆ ನಡೆಯುತ್ತಿರುವ ಮೆಟೀರಿಯಲ್ ರಿಕವರಿ ಪ್ಲಾಂಟ್ಗೆ ಆಯುಕ್ತರು ಭೇಟಿ ನೀಡಿ ತ್ಯಾಜ್ಯ ಮರುಬಳಕೆ ಕಾರ್ಯವನ್ನು ಪರಿಶೀಲಿಸಿದರು. ಸಂಸ್ಥೆಯ ಚಟುವಟಿಕೆಗಳಿಗೆ ಪಾಲಿಕೆಯಿಂದ ಅಗತ್ಯವಿರುವ ಎಲ್ಲಾ ರೀತಿಯ ಬೆಂಬಲ ಮತ್ತು ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಬಳಿಕ ಜೆಪ್ಪಿನಮೊಗರು-ಕುಡ್ಪಾಡಿ ರಸ್ತೆಯ ರಾಜಕಾಲುವೆಗೆ ತೆರಳಿದ ಆಯುಕ್ತರು, ಪ್ಲಾಸ್ಟಿಕ್ ಫಿಶರ್ ಸಂಸ್ಥೆಯು ಅಳವಡಿಸಿರುವ ‘ಟ್ರ್ಯಾಶ್ ಬೂಮ್’ (Trash Boom) ತ್ಯಾಜ್ಯ ಸಂಗ್ರಹಣಾ ವ್ಯವಸ್ಥೆಯನ್ನು ವೀಕ್ಷಿಸಿದರು. ರಾಜಕಾಲುವೆಯಲ್ಲಿ ಹರಿಯುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾಮಾನ್ಯ ದಿನಗಳಲ್ಲಿ 7 ರಿಂದ 10 ದಿನಕ್ಕೊಮ್ಮೆ ಹಾಗೂ ಮಳೆಗಾಲದಲ್ಲಿ ಪ್ರತಿ ನಾಲ್ಕು ದಿನಗಳಿಗೊಮ್ಮೆ ಸಂಗ್ರಹಿಸಿ ತೆರವುಗೊಳಿಸುವ ವಿಧಾನವನ್ನು ಸಂಸ್ಥೆಯ ಪ್ರತಿನಿಧಿಗಳು ವಿವರಿಸಿದರು.
ಈ ಪರಿಶೀಲನಾ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಉಪಆಯುಕ್ತರಾದ (ಅಭಿವೃದ್ಧಿ) ನರೇಶ್ ಪಿ. ಶೆಣೈ, ಪರಿಸರ ಎಂಜಿನಿಯರಿಂಗ್ ವಿಭಾಗ ಹಾಗೂ ಎಂಜಿನಿಯರಿಂಗ್ ವಿಭಾಗದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









