ಮಂಗಳೂರು : ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಸಾಫ್ಟ್ವೇರ್ ಎಂಜಿನಿಯರಿಂಗ್ ವಿಭಾಗದ ಹಿರಿಯ ತಂತ್ರಜ್ಞಾನ ಯೋಜನಾ ವ್ಯವಸ್ಥಾಪಕಿಯಾಗಿ ಯಶಸ್ವಿ ವೃತ್ತಿಜೀವನ ನಡೆಸುತ್ತಿರುವ ಅನಿತಾ ನಾಯಕ್ ಅವರು ತುಳುವ ಮಹಾಸಭೆ ಕ್ಯಾಲಿಫೋರ್ನಿಯಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಳೆದ ಮೂರು ದಶಕಗಳಿಂದ ಸಾಮಾಜಿಕ, ಶೈಕ್ಷಣಿಕ, ಸಮುದಾಯ ಆರೋಗ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಇವರು, ಪ್ರಮಾಣೀಕೃತ ಯೋಗ ಶಿಕ್ಷಕಿ ಹಾಗೂ ಆಯುರ್ವೇದ ಜೀವನಶೈಲಿ ಸಲಹೆಗಾರ್ತಿಯಾಗಿಯೂ ಜನಪ್ರಿಯರಾಗಿದ್ದಾರೆ. ಕ್ಯಾಲಿಫೋರ್ನಿಯಾದಲ್ಲಿ ಸಮಗ್ರ ಆರೋಗ್ಯ ಸೇವಾ ಸಂಸ್ಥೆಯನ್ನು ನಡೆಸಿ ಧನಾತ್ಮಕ ಜೀವನಶೈಲಿಯನ್ನು ಉತ್ತೇಜಿಸುತ್ತಿರುವ ಇವರು, ಅಮೆರಿಕದ ಪ್ರಮುಖ ಲಾಭರಹಿತ ಸಂಸ್ಥೆಗಳಲ್ಲೂ ಕ್ರಿಯಾಶೀಲವಾಗಿ ಕೆಲಸ ಮಾಡಿದ್ದಾರೆ.
ಪರದೇಶದಲ್ಲೂ ಮಾತೃಭಾಷೆ ತುಳು ಹಾಗೂ ತುಳುನಾಡಿನ ವೈಭವೋಪೇತ ಸಂಸ್ಕೃತಿಯನ್ನು ಜೀವಂತವಾಗಿರಿಸುವ ಮಹತ್ವಾಕಾಂಕ್ಷೆಯೊಂದಿಗೆ ಅನಿತಾ ಅವರು 2021ರಲ್ಲಿ ‘ತುಳಸಿ ತುಳು ಕೂಟ’ ಸಂಸ್ಥೆಯನ್ನು ಹುಟ್ಟುಹಾಕಿದರು. ಇಂದು 270ಕ್ಕೂ ಅಧಿಕ ಸದಸ್ಯರನ್ನೊಳಗೊಂಡ ಬೃಹತ್ ಸಮುದಾಯವಾಗಿ ಬೆಳೆದಿರುವ ಈ ಸಂಸ್ಥೆಯು ಬಿಸು, ಕೊರಲ್ ಪರ್ಬ (ಪುದ್ದರ್) ಮುಂತಾದ ಸಾಂಪ್ರದಾಯಿಕ ಪರ್ವದಿನಗಳನ್ನು ವಿಜೃಂಭಣೆಯಿಂದ ಆಚರಿಸುವ ಮೂಲಕ ಯುವಪೀಳಿಗೆಗೆ ಸಾಂಸ್ಕೃತಿಕ ಬೇರುಗಳ ಪರಿಚಯ ಮಾಡಿಕೊಡುತ್ತಿದೆ.
ಆಲ್ ಅಮೆರಿಕಾ ತುಳು ಅಸೋಸಿಯೇಷನ್ (AATA) ಸಂಸ್ಥೆಯ ಮಾಜಿ ಕ್ಯಾಲಿಫೋರ್ನಿಯಾ ರಾಯಭಾರಿಯಾಗಿ ಹಾಗೂ ಪ್ರಸ್ತುತ ಆಡಳಿತ ಮಂಡಳಿಯ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಅನಿತಾ ನಾಯಕ್, ಜಾಗತಿಕ ಮಟ್ಟದ ಮೊದಲ ಆನ್ಲೈನ್ ತುಳು ಗ್ರಂಥಾಲಯ ‘ರಾಣಿ ಅಬ್ಬಕ್ಕ ಗೇಣದ ಚಾವಡಿ’ ಯಶಸ್ವಿ ಸ್ಥಾಪನೆಯ ರೂವಾರಿಯಾಗಿದ್ದಾರೆ. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ನಿಟ್ಟೆ ವಿಶ್ವವಿದ್ಯಾಲಯದ ತುಳು ಕೇಂದ್ರದ ಸಹಯೋಗದೊಂದಿಗೆ ಈ ಗ್ರಂಥಾಲಯ ಯೋಜನೆಗೆ ಅವರು ಚಾಲನೆ ನೀಡಿದ್ದರು.
ಅನಿತಾ ನಾಯಕ್ ಅವರ ಈ ಅಪಾರ ಸಾಂಸ್ಕೃತಿಕ ಕೊಡುಗೆ ಮತ್ತು ಕ್ರಿಯಾಶೀಲತೆಯನ್ನು ಗುರುತಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅವರು ಅವರನ್ನು ಕ್ಯಾಲಿಫೋರ್ನಿಯಾ ಘಟಕದ ನೂತನ ಅಧ್ಯಕ್ಷರಾಗಿ ಅಧಿಕೃತವಾಗಿ ನೇಮಕಗೊಳಿಸಿದ್ದಾರೆ.
ಈ ನೂತನ ನೇಮಕಕ್ಕೆ ತುಳುವರ್ಲ್ಡ್ ಫೌಂಡೇಶನ್ನ ಗೌರವಾಧ್ಯಕ್ಷ ಶ್ರೀಹರಿನಾರಾಯಣದಾಸ ಅಸ್ರಣ್ಣ ಕಟೀಲ್, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಪ್ರಧಾನ ಕಾರ್ಯದರ್ಶಿ ವಸಂತ ರೈ ಕುತ್ತೆತ್ತೂರು, ನಿರ್ದೇಶಕ ಡಾ. ರಾಜೇಶ್ ಕೃಷ್ಣ ಆಳ್ವ, ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಕರ್ನಾಟಕ ರಾಜ್ಯ ಸಮಿತಿ ಅಧ್ಯಕ್ಷ ದೇವೇಂದ್ರ ಹೆಗ್ಗಡೆ ಕೊಕ್ರಾಡಿ, ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ. ಅವಿನ್ ಬಿ.ಆರ್. ಆಳ್ವ ಹಾಗೂ ಪ್ರಧಾನ ಸಂಚಾಲಕ ವಿಶ್ವನಾಥ ಆಚಾರ್ಯ ಅವರುಗಳು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿ ಶುಭ ಕೋರಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









