ಮಂಗಳೂರು : ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ದೇಶಾದ್ಯಂತ ರಗಳೆ ಹಾಗೂ ಅರಾಜಕತೆಯನ್ನು ಹುಟ್ಟುಹಾಕಲು ಯತ್ನಿಸಿ ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ, ಅವರು ಕೈಯಲ್ಲಿ ‘ಟೂಲ್ ಕಿಟ್’ ಹಿಡಿದುಕೊಂಡಿರುವ ಒಬ್ಬ ‘ಫೂಲ್ ಕಿಡ್’ ಇದ್ದಂತೆ ಎಂದು ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ವಕ್ತಾರ ಹಾಗೂ ಸುಪ್ರೀಂ ಕೋರ್ಟ್ನ ಹಿರಿಯ ನ್ಯಾಯವಾದಿ ಗೌರವ್ ಭಾಟಿಯಾ ವ್ಯಂಗ್ಯವಾಡಿದ್ದಾರೆ. ಮಂಗಳೂರಿನಲ್ಲಿ ಶುಕ್ರವಾರ ಕರೆದಿದ್ದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಹಾಗೂ ರಾಹುಲ್ ಗಾಂಧಿ ಅವರ ವಿರುದ್ಧ ಹರಿಹಾಯ್ದರು.
ದೇಶದ ಇತಿಹಾಸದಲ್ಲಿ ಇದುವರೆಗೆ ಒಟ್ಟು 12 ಬಾರಿ ಎಸ್ಐಆರ್ (SIR) ಪ್ರಕ್ರಿಯೆಗಳನ್ನು ನಡೆಸಲಾಗಿದ್ದು, ಆ ಪೈಕಿ 10 ಬಾರಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸಂಸ್ಥಾಪನೆಗೊಂಡಿದ್ದವು. 2004ರಲ್ಲಿ ಯುಪಿಎ ಆಡಳಿತ ಅವಧಿಯಲ್ಲಿ ಎಸ್ಐಆರ್ ಜಾರಿಗೆ ತಂದಾಗ ಯಾವೊಬ್ಬ ನಾಯಕರೂ ವಿರೋಧ ವ್ಯಕ್ತಪಡಿಸಿರಲಿಲ್ಲ. ಅಂದು ಕಾಂಗ್ರೆಸ್ ನಡೆಸಿದಾಗ ಸಾಂವಿಧಾನಿಕವಾಗಿದ್ದ ಈ ಪ್ರಕ್ರಿಯೆ, ಇಂದು ಬಿಜೆಪಿ ಆಡಳಿತದಲ್ಲಿ ಅಸಾಂವಿಧಾನಿಕವಾಗುವುದು ಹೇಗೆ ಎಂದು ಪ್ರಶ್ನಿಸಿದ ಭಾಟಿಯಾ, ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
2004ರಿಂದ 2014ರವರೆಗಿನ ತಮ್ಮ ಹತ್ತು ವರ್ಷಗಳ ಆಡಳಿತಾವಧಿಯಲ್ಲಿ ಯುಪಿಎ ಸರ್ಕಾರವು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕಾಗಿ ಎಸ್ಐಆರ್ ಕೈಗೊಳ್ಳುವುದನ್ನೇ ಸಂಪೂರ್ಣವಾಗಿ ನಿರ್ಲಕ್ಷಿಸಿತು. ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳುವ ನುಸುಳುಕೋರರಿಗೆ ಬೆಂಬಲ ನೀಡುವ ಉದ್ದೇಶದಿಂದಲೇ ಕಾಂಗ್ರೆಸ್ ಈ ರೀತಿಯ ನಿರ್ಧಾರ ತಳೆದಿತ್ತು ಎಂದು ಗೌರವ್ ಭಾಟಿಯಾ ಗಂಭೀರ ಆರೋಪ ಮಾಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









