ಮಂಗಳೂರು: ಬೆಳಕಿನ ಹಬ್ಬ ದೀಪಾವಳಿಯ ಶುಭ ಸಂದರ್ಭದಲ್ಲಿ ಪಟಾಕಿಗಳನ್ನು ಎಚ್ಚರಿಕೆಯಿಂದ ಬಳಸದಿದ್ದರೆ ಮುಗ್ಧ ಮಕ್ಕಳ ಜೀವನವೇ ಕತ್ತಲೆಯಲ್ಲಿ ಮುಳುಗುವ ಅಪಾಯವಿರುತ್ತದೆ. ಆದ್ದರಿಂದ ಪೋಷಕರು ಸೇರಿದಂತೆ ಸಾರ್ವಜನಿಕರೆಲ್ಲರೂ ಸೂಕ್ತ ಜಾಗರೂಕತೆ ವಹಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯಾದ ಡಾ. ತಿಮ್ಮಯ್ಯ ಹೆಚ್.ಆರ್. ಅವರು ಮನವಿ ಮಾಡಿದ್ದಾರೆ. ಹಬ್ಬದ ದಿನಗಳಲ್ಲಿ ಯಾವುದೇ ರೀತಿಯ ಅನಿರೀಕ್ಷಿತ ಅವಘಡಗಳು ಎದುರಾದರೆ ಅವುಗಳನ್ನು ಎದುರಿಸಲು ಜಿಲ್ಲೆಯ ವೈದ್ಯಕೀಯ ವಿಭಾಗ ಸನ್ನದ್ಧವಾಗಿದ್ದು, ಸಾರ್ವಜನಿಕರು ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಪಟಾಕಿ ದುರಂತಗಳಿಂದಾಗಿ ಅನೇಕ ಮಕ್ಕಳು ಕಣ್ಣಿನ ದೃಷ್ಟಿ ಕಳೆದುಕೊಳ್ಳುವುದು ಅಥವಾ ಮುಖಕ್ಕೆ ತೀವ್ರ ಗಾಯ ಮಾಡಿಕೊಳ್ಳುವ ಘಟನೆಗಳು ನಡೆಯುತ್ತಲೇ ಇರುತ್ತವೆ. ಪಟಾಕಿಗಳಿಂದ ತೀವ್ರ ಪರಿಸರ ಮಾಲಿನ್ಯ, ಹೊಗೆ ಹಾಗೂ ತ್ಯಾಜ್ಯ ಸೃಷ್ಟಿಯಾಗುವುದರ ಜತೆಗೆ ಜೀವಕ್ಕೆ ಅಪಾಯವೂ ಎದುರಾಗುತ್ತದೆ. ಹೀಗಾಗಿ ಅಪಾಯ ತರುವ ಸಿಡಿಮದ್ದುಗಳ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ. ಅನಿವಾರ್ಯವೆನಿಸಿದರೆ ಹಿರಿಯರ ನೇರ ಉಸ್ತುವಾರಿಯಲ್ಲಿ ಕೇವಲ ಬೆಳಕು ನೀಡುವ ಸಣ್ಣ ಪ್ರಮಾಣದ ಸುರುಸುರುಬತ್ತಿಗಳನ್ನು ಮಾತ್ರ ಬಳಸಬೇಕು. ಪಟಾಕಿಗಳ ಬದಲು ಸಾಂಪ್ರದಾಯಿಕ ಹಣತೆಗಳನ್ನು ಬೆಳಗಿಸಿ ಹಬ್ಬವನ್ನು ಆನಂದಿಸುವುದು ಸೂಕ್ತವಾಗಿದೆ.
ಪಟಾಕಿ ಹಚ್ಚುವಾಗ ಗಾಯಗೊಂಡವರಿಗೆ ಕೂಡಲೇ ಸೂಕ್ತ ವೈದ್ಯಕೀಯ ನೆರವು ನೀಡಲು ಜಿಲ್ಲೆಯ ಸಂಪೂರ್ಣ ಆರೋಗ್ಯ ಸಿಬ್ಬಂದಿಯನ್ನು ಸಜ್ಜುಗೊಳಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ಲಭ್ಯವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದಲ್ಲದೆ ಮಂಗಳೂರಿನ ಜಿಲ್ಲಾ ವೆನ್ ಲಾಕ್ ಆಸ್ಪತ್ರೆಯ ನೇತ್ರ ಚಿಕಿತ್ಸಾ ವಿಭಾಗವನ್ನು ವಿಶೇಷವಾಗಿ ಸನ್ನದ್ಧ ಸ್ಥಿತಿಯಲ್ಲಿಡಲಾಗಿದೆ.
ಪಟಾಕಿಯಿಂದ ಗಾಯಗೊಂಡು ಬರುವ ಸಂತ್ರಸ್ತರಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣ ತುರ್ತು ಚಿಕಿತ್ಸೆ ಆರಂಭಿಸಬೇಕು ಮತ್ತು ಯಾವುದೇ ಕಾರಣಕ್ಕೂ ಶಾಶ್ವತ ವೈಕಲ್ಯ ಅಥವಾ ದೃಷ್ಟಿಹಾನಿಯಾಗದಂತೆ ಕಳಕಳಿಯಿಂದ ಚಿಕಿತ್ಸೆ ನೀಡಬೇಕು ಎಂದು ಜಿಲ್ಲೆಯ ಎಲ್ಲಾ ಖಾಸಗಿ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಂಗಳಿಗೆ ಆರೋಗ್ಯ ಇಲಾಖೆ ಕಟ್ಟುನಿಟ್ಟಿನ ಸುತ್ತೋಲೆ ರವಾನಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









