ಉಡುಪಿ : ಉಡುಪಿಯ ಶ್ರೀ ಕೃಷ್ಣಮಠದಲ್ಲಿ 2028ರಲ್ಲಿ ನೆರವೇರಲಿರುವ ಸೋದೆ ಮಠದ ಪರ್ಯಾಯ ಮಹೋತ್ಸವದ ಪೂರ್ವಭಾವಿ ‘ಬಾಳೆಮುಹೂರ್ತ’ದ ಅಂಗವಾಗಿ, ಬಾಳೆಯ ಗರಿಷ್ಠ ಕೃಷಿ ಮಹತ್ವವನ್ನು ಸಾರಲು ಸೋದೆ ಶ್ರೀವಾದಿರಾಜ ಮಠದ ಆಶ್ರಯದಲ್ಲಿ ನವೆಂಬರ್ 29ರಿಂದ ಡಿಸೆಂಬರ್ 1ರವರೆಗೆ ಕೃಷ್ಣಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ‘ಕದಳೀ ವಿಶ್ವದರ್ಶನ’ ಎಂಬ ರಾಷ್ಟ್ರಮಟ್ಟದ ಬೃಹತ್ ಬಾಳೆ ಮೇಳವನ್ನು ಆಯೋಜಿಸಲಾಗಿದೆ. ಸೋದೆ ಮಠಾಧೀಶರಾದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ್ದು, ಬಾಳೆ ಕೃಷಿಯ ಆಧುನಿಕ ತಂತ್ರಜ್ಞಾನ, ಕೃಷಿ ಆಧಾರಿತ ಉದ್ಯಮಶೀಲತೆ ಉತ್ತೇಜಿಸುವ ಉದ್ದೇಶದಿಂದ 100ಕ್ಕೂ ಹೆಚ್ಚು ತಳಿಯ ಬಾಳೆ ಗೊನೆಗಳ ಪ್ರದರ್ಶನ, 150ಕ್ಕೂ ಅಧಿಕ ತಳಿಗಳ ಸಸಿಗಳ ಮಾರಾಟ ಹಾಗೂ 500ಕ್ಕೂ ಹೆಚ್ಚು ತಳಿಗಳ ಸವಿಸ್ತಾರ ಪರಿಚಯವನ್ನು ಮೇಳದಲ್ಲಿ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ದೇಶದ ಅಪರೂಪದ ಬಾಳೆ ತಳಿಯೊಂದನ್ನು ಆಯ್ಕೆ ಮಾಡಿ ಸೋದೆ ಮಠದ ವತಿಯಿಂದ ಬ್ರ್ಯಾಂಡಿಂಗ್ ಮಾಡಿ ಲೋಕಾರ್ಪಣೆಗೊಳಿಸುವ ಯೋಜನೆಯಿದೆ.
ಮೇಳದ ಉದ್ಘಾಟನೆಯು ನ. 29ರಂದು ಬೆಳಗ್ಗೆ 10:30ಕ್ಕೆ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಬಾಳೆ ನಾರಿನ ಜವಳಿ, ಕರಕುಶಲ ವಸ್ತುಗಳು ಹಾಗೂ ಹ್ಯಾಂಗ್ಯೋ ಸಂಸ್ಥೆಯ ಹೊಸ ‘ಬಾಳೆಹಣ್ಣಿನ ಐಸ್ಕ್ರೀಮ್’ ಸಹ ಬಿಡುಗಡೆಯಾಗಲಿದೆ. ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರ ಹಾಗೂ ಸಿಎಫ್ಟಿಆರ್ಐ (CFTRI) ತಜ್ಞರು ರೈತರಿಗೆ ಮಾರ್ಗದರ್ಶನ ನೀಡಲಿದ್ದು, ಪ್ರತಿದಿನ ವಿವಿಧ ಕೃಷಿ ತಜ್ಞರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮಗಳು ನೆರವೇರಲಿವೆ. ಇದರ ಪೂರ್ವಭಾವಿಯಾಗಿ ನ. 22ರಂದು ಶಾಲಾ ವಿದ್ಯಾರ್ಥಿಗಳಿಗೆ ಬಾಳೆ ಆಧಾರಿತ ಚಿತ್ರಕಲಾ ಸ್ಪರ್ಧೆ ನಡೆಯಲಿದ್ದು, ನ. 29ರಿಂದ ಮೂರು ದಿನಗಳ ಕಾಲ ನಡೆಯುವ ಈ ಮಹೋತ್ಸವದಲ್ಲಿ ತಮಿಳುನಾಡು, ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧೆಡೆಯಿಂದ 2,000ಕ್ಕೂ ಅಧಿಕ ರೈತರು ಹಾಗೂ 10,000ಕ್ಕೂ ಹೆಚ್ಚು ಸಾರ್ವಜನಿಕರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಶ್ರೀಗಳು ತಿಳಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









