ಮೂಡುಬಿದಿರೆ : ಇತ್ತೀಚೆಗೆ ನಡೆದ ಮೈಸೂರು ದಸರಾ ಕಂಬಳದಲ್ಲಿ ಕಂಬಳದ ಯಜಮಾನರು, ತೀರ್ಪುಗಾರರು, ಸಮಿತಿ ಸದಸ್ಯರು ಹಾಗೂ ಹಿರಿಯರಿಗೆ ಸೂಕ್ತ ಪ್ರವೇಶ ಅವಕಾಶ ಕಲ್ಪಿಸದೆ ಮತ್ತು ಪೋಲಿಸರು ಪ್ರವೇಶ ನಿರಾಕರಿಸುವ ಮೂಲಕ ಸೂಕ್ತ ಗೌರವ ನೀಡದಿರುವುದಕ್ಕೆ ಮೂಡುಬಿದಿರೆ ಪ್ರವಾಸಿ ಮಂದಿರದಲ್ಲಿ ಬುಧವಾರ ಜರುಗಿದ ಜಿಲ್ಲಾ ಕಂಬಳ ಸಮಿತಿಯ ಅತ್ಯ ತುರ್ತು ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಯಿತು. ಕಂಬಳ ಕೂಟಗಳು ಕೇವಲ ಅಧಿಕಾರಿಗಳ ಕಾರ್ಯಕ್ರಮಗಳಾಗದೆ ಜಿಲ್ಲಾ ಕಂಬಳ ಸಮಿತಿ ಮತ್ತು ಅಸೋಸಿಯೇಶನ್ನ ನಿಯಮಾವಳಿಗಳಂತೆಯೇ ನಡೆಯಬೇಕು ಹಾಗೂ ಕಂಬಳ ಪ್ರಮುಖರಿಗೆ ಗೌರವ ಸಿಗದಿದ್ದರೆ ಸರ್ಕಾರಿ ಮಟ್ಟದ ಕಂಬಳಗಳಿಗೆ ಸಹಕರಿಸದಿರಲು ಸಭೆಯಲ್ಲಿ ಗಂಭೀರ ಚಿಂತನೆ ನಡೆಸಲಾಯಿತು.
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಸನಿಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಂಬಳ ಕ್ಷೇತ್ರದ ಹಲವು ಗೊಂದಲಗಳಿಗೆ ತೆರೆ ಎಳೆಯುವ ಮಹತ್ವದ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಇನ್ಮುಂದೆ ಕಂಬಳದ ತೀರ್ಪುಗಾರರು ಹಾಗೂ ವೀಕ್ಷಕ ವಿವರಣೆಗಾರರು ಸಮಿತಿಯ ಆಜೀವ ಸದಸ್ಯತ್ವ ಹೊಂದುವುದು ಕಡ್ಡಾಯವಾಗಿದ್ದು, ಸದಸ್ಯರಲ್ಲದವರನ್ನು ನಿಯೋಜಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಯಿತು. ಅಲ್ಲದೆ, ಕಂಬಳದ ಕಾಲಮಿತಿಯನ್ನು ಕಾಯ್ದುಕೊಳ್ಳಲು ಗಂತಿನಲ್ಲಿ ಕೋಣಗಳನ್ನು ಬಿಡಲು ಗರಿಷ್ಠ 15 ನಿಮಿಷಗಳ ಕಾಲಾವಕಾಶ ನಿಗದಿಪಡಿಸುವುದರ ಜೊತೆಗೆ, 150 ಜತೆ ಕೋಣಗಳಿದ್ದಲ್ಲಿ 24 ಗಂಟೆ ಹಾಗೂ ಅದಕ್ಕಿಂತ ಹೆಚ್ಚಿದ್ದಲ್ಲಿ 30 ಗಂಟೆಯೊಳಗೆ ಕೂಟ ಮುಕ್ತಾಯಗೊಳಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಭಾಸ್ಕರ ಎಸ್. ಕೋಟ್ಯಾನ್, ಪಿ. ಆರ್. ಶೆಟ್ಟಿ ಸೇರಿದಂತೆ ಪ್ರಮುಖರಾದ ವಿಜಯಕುಮಾರ್ ಕಂಗಿನಮನೆ, ಲೋಕೇಶ್ ಶೆಟ್ಟಿ, ಸಂದೀಪ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









