ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದ ಪಾಂಗಾಳ ನಿವಾಸಿ ಸೌಜನ್ಯ ಕೊಲೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ), ಈ ಕುರಿತು ಕೂಲಂಕಷವಾಗಿ ಶೋಧ ನಡೆಸಲು ಮೂವರು ನುರಿತ ವಿಧಿವಿಜ್ಞಾನ ಪ್ರಯೋಗಾಲಯದ (ಎಫ್ಎಸ್ಎಲ್) ವೈದ್ಯರನ್ನು ಒಳಗೊಂಡ ವಿಶೇಷ ವೈದ್ಯಕೀಯ ಮಂಡಳಿಯೊಂದನ್ನು ರಚಿಸಿದೆ. ಇದರ ಭಾಗವಾಗಿ ಎಸ್ಐಟಿ ಮುಖ್ಯಸ್ಥ ಚೇತನ್ ಸಿಂಗ್ ರಾಥೋಡ್ ಅವರ ಮಾರ್ಗದರ್ಶನದಲ್ಲಿ ರಚನೆಯಾದ ತಜ್ಞರ ತಂಡವು, ನವೆಂಬರ್ 17ರ ಸಂಜೆ ಸೌಜನ್ಯಳ ಮೃತದೇಹ ಪತ್ತೆಯಾಗಿದ್ದ ಧರ್ಮಸ್ಥಳದ ಮಣ್ಣಸಂಕ ಪ್ರದೇಶಕ್ಕೆ ಖುದ್ದು ಭೇಟಿ ನೀಡಿ ಮಹತ್ವದ ಸ್ಥಳ ಮಹಜರು ಹಾಗೂ ಪರಿಶೀಲನೆ ನಡೆಸಿದೆ.
ಈ ವೈದ್ಯಕೀಯ ಮಂಡಳಿಯಲ್ಲಿ ಬೆಂಗಳೂರು, ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಿಂದ ತಲಾ ಒಬ್ಬರಂತೆ ಒಟ್ಟು ಮೂವರು ಹಿರಿಯ ವೈದ್ಯಕೀಯ ತಜ್ಞರು ಸೇರಿಕೊಂಡಿದ್ದಾರೆ. ಸೌಜನ್ಯಳನ್ನು ಬೇರೆಡೆಯೇ ಅತ್ಯಾಚಾರಗೈದು ಕೊಲೆಗೈದು ಬಳಿಕ ಮೃತದೇಹವನ್ನು ಮಣ್ಣಸಂಕದ ಕಾಡಿಗೆ ತಂದು ಎಸೆಯಲಾಗಿದೆಯೆ ಅಥವಾ ಹತ್ಯೆಯು ಕೇವಲ ಇದೇ ಸ್ಥಳದಲ್ಲೇ ಜರುಗಿತ್ತೇ ಎಂಬ ನಿಗೂಢ ಸತ್ಯವನ್ನು ವೈಜ್ಞಾನಿಕವಾಗಿ ಶೋಧಿಸುವುದು ಈ ತನಿಖೆಯ ಮುಖ್ಯ ಉದ್ದೇಶವಾಗಿದೆ.
ಹಿಂದೆ ಮೃತದೇಹ ಪತ್ತೆಯಾದ ಸಂದರ್ಭದಲ್ಲಿ ದಾಖಲಿಸಿಕೊಳ್ಳಲಾದ ದೃಶ್ಯಾವಳಿಗಳು, ಛಾಯಾಚಿತ್ರಗಳು ಹಾಗೂ ವಿಡಿಯೋ ತುಣುಕುಗಳನ್ನು ಕಣ್ಣ ಮುಂದೆಿಟ್ಟುಕೊಂಡು ತಜ್ಞರು ಸ್ಥಳದ ನೈಸರ್ಗಿಕ ಸ್ವರೂಪ ಮತ್ತು ಪರಿಸ್ಥಿತಿಯನ್ನು ಪುನರಾವರ್ತಿಸಿ ಪರಾಮರ್ಶಿಸಿದ್ದಾರೆ. ಈ ವೈಜ್ಞಾನಿಕ ಸ್ಥಳ ಪರಿಶೀಲನಾ ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕ, ವೈದ್ಯಕೀಯ ಮಂಡಳಿಯು ತನ್ನ ಅಂತಿಮ ತನಿಖಾ ವರದಿಯನ್ನು ಎಸ್ಐಟಿಗೆ ಅಧಿಕೃತವಾಗಿ ಸಲ್ಲಿಸಲಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









