ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ಪ್ರತಿಯೊಬ್ಬರೂ ಮಹತ್ತರ ಜವಾಬ್ದಾರಿ ವಹಿಸಬೇಕು : ಜಿಲ್ಲಾಧಿಕಾರಿ

11:57 AM, Wednesday, November 9th, 2011
Share
1 Star2 Stars3 Stars4 Stars5 Stars
(5 rating, 5 votes)
Loading...

Pollution control

ಮಂಗಳೂರು :  ದ.ಕನ್ನಡ ಜಿಲ್ಲಾಡಳಿತ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿ ಮಂಗಳವಾರ ನಗರದಲ್ಲಿ ಆಯೋಜಿಸಿದ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ  ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಡಾ| ಎನ್‌.ಎಸ್‌. ಚನ್ನಪ್ಪ ಗೌಡ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ವಿದ್ಯಾರ್ಥಿಗಳು ಪರಿಸರ ಮಾಲಿನ್ಯ ತಡೆಯುವಲ್ಲಿ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಬೇಕು. ವಾಯುಮಾಲಿನ್ಯದಿಂದ ಜಗತ್ತಿನಲ್ಲಿ 2.5 ಲಕ್ಷ ಮಂದಿ ಸಾವಿಗೀಡಾಗುತ್ತಿದ್ದಾರೆ. ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ಪ್ರತಿಯೊಬ್ಬರೂ ಮಹತ್ತರ ಜವಾಬ್ದಾರಿ ವಹಿಸಬೇಕು ಎಂದು ಚನ್ನಪ್ಪ ಗೌಡ ಹೇಳಿದರು.

ಪರಿಸರ ಮಾಲಿನ್ಯದಿಂದ ಜಾಗತಿಕ ತಾಪಮಾನ ಕೂಡಾ ಗಣನೀಯವಾಗಿ ಏರುತ್ತಿದೆ. ಭಾರತ ಈಗಾಗಲೇ 7ನೇ ಸ್ಥಾನದಲ್ಲಿದೆ. ನಗರದಲ್ಲಿ ಕಸ ವಿಲೇವಾರಿ, ಒಳಚರಂಡಿ ವ್ಯವಸ್ಥೆಗಳು ಇನ್ನಷ್ಟು ಸುಧಾರಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ವಾಯುಮಾಲಿನ್ಯ ತಡೆ ಪ್ರತಿಜ್ಞಾ ವಿಧಿಯನ್ನು ಜಿಲ್ಲಾಧಿಕಾರಿ ಅವರು ಬೋಧಿಸಿದರು. ವಾಯುಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಯುವುದು ಹೇಗೆ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಲಾಯಿತು.

ಸಂತ ಅಲೋಶಿಯಸ್‌ ಕಾಲೇಜಿನ ಪ್ರಾಂಶುಪಾಲ ಜಾನ್‌ ಎಡ್ವರ್ಡ್‌ ಡಿ’ಸಿಲ್ವಾ ಅವರು ಅಧ್ಯಕ್ಷತೆ ವಹಿಸಿದ್ದರು. ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಅವರು ಮುಖ್ಯ ಅತಿಥಿಯಾಗಿದ್ದರು. ಎನ್‌ಐಟಿಕೆ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಅಸಿಸ್ಟೆಂಟ್‌ ಪ್ರೊಫೆಸರ್‌ ಡಾ| ಬಿ. ಮನು ಅವರು ಉಪನ್ಯಾಸ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ. ಮಲ್ಲಿಕಾರ್ಜುನ ಅವರು ಸ್ವಾಗತಿಸಿ, ಪ್ರಸ್ತಾವನೆಗೈದರು. ಸೀನಿಯರ್‌ ಇನ್‌ಸ್ಪೆಕ್ಟರ್‌ ಜಿ.ಎಸ್‌. ಹೆಗ್ಡೆ ವಂದಿಸಿದರು. ಕೇಶವ ಧರಣಿ ಕಾರ್ಯಕ್ರಮ ನಿರೂಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English