ಪುತ್ತೂರು : ಉಜಿರೆಯ ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಪುತ್ತೂರು ಉಪವಿಭಾಗಾಧಿಕಾರಿ (AC) ಸ್ಟೆಲ್ಲಾ ವರ್ಗಿಸ್ ಅವರು ಇದೀಗ ಮೂರನೇ ಬಾರಿಗೆ ಗಡಿಪಾರು ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ನಿರ್ದೇಶನದ ಅನ್ವಯ ಈ ಕ್ರಮ ಕೈಗೊಳ್ಳಲಾಗಿದ್ದು, ಮಾರ್ಚ್ 16ರಿಂದ ಸೆಪ್ಟೆಂಬರ್ 16ರವರೆಗೆ ಅನ್ವಯವಾಗುವಂತೆ ಒಟ್ಟು ಆರು ತಿಂಗಳ ಕಾಲ ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ನೀಡಲಾಗಿದೆ.
ಈ ಆದೇಶವನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿನಿ ಸಿ.ಕೆ. ಅವರ ನೇತೃತ್ವದ ಪೊಲೀಸ್ ತಂಡವು ಮಾರ್ಚ್ 16ರ ಮಧ್ಯರಾತ್ರಿ ಉಜಿರೆಯಲ್ಲಿರುವ ಮಹೇಶ್ ಶೆಟ್ಟಿ ತಿಮರೋಡಿ ಅವರ ನಿವಾಸಕ್ಕೆ ತೆರಳಿತ್ತು. ಆದರೆ, ಪೊಲೀಸರು ಸ್ಥಳಕ್ಕೆ ಹೋದ ಸಮಯದಲ್ಲಿ ತಿಮರೋಡಿ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಅವರು ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ಗಡಿಪಾರು ಆದೇಶದ ನೋಟಿಸ್ ಪ್ರತಿಯನ್ನು ಅವರ ಮನೆಯ ಗೋಡೆಗೆ ಅಂಟಿಸಿ ಬಂದಿದ್ದಾರೆ.
ಕಳೆದ ಕೆಲವು ಸಮಯದಿಂದ ತಿಮರೋಡಿ ಅವರ ವಿರುದ್ಧ ಸರಣಿ ಕಾನೂನು ಕ್ರಮಗಳು ಜರುಗುತ್ತಿದ್ದು, ಇದು ಅವರಿಗೆ ಹೊರಡಿಸಲಾದ ಸತತ ಮೂರನೇ ಗಡಿಪಾರು ಆದೇಶವಾಗಿದೆ. ನ್ಯಾಯಾಲಯದ ಆದೇಶ ಮತ್ತು ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಸ್ತುತ ತಿಮರೋಡಿ ಅವರು ನಾಪತ್ತೆಯಾಗಿದ್ದು, ಆದೇಶ ಜಾರಿಯ ನಂತರದ ಮುಂದಿನ ಬೆಳವಣಿಗೆಗಳು ಕುತೂಹಲ ಕೆರಳಿಸಿವೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









