ಮಂಜೇಶ್ವರ : ಕುಂಜತ್ತೂರು ತೂಮಿನಾಡು ಹಿಲ್ ಟಾಪ್ ಎಂಬಲ್ಲಿ ಇಂದು ಸಂಜೆ ಮನಕಲಕುವ ಘಟನೆ ನಡೆದಿದೆ. 18 ವರ್ಷದ ಮರಿಯಮತ್ ಜುಮೈರಾ ಎಂಬಾಕೆಯನ್ನು ಆಕೆಯ ತಂದೆ ಉಮ್ಮರ್ ಪಾಷ ಕಡಿದು ಕೊಲೆಗೈದಿದ್ದಾನೆ. ವಿದೇಶದಲ್ಲಿದ್ದ ಉಮ್ಮರ್ ಪಾಷ ಮೂರು ತಿಂಗಳ ಹಿಂದೆಯಷ್ಟೇ ಊರಿಗೆ ಮರಳಿದ್ದು, ಕುಟುಂಬದಲ್ಲಿ ಕಳೆದ ಕೆಲವು ದಿನಗಳಿಂದ ಆಸ್ತಿ ವಿಚಾರವಾಗಿ ತೀವ್ರ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಇದೇ ಜಗಳ ಇಂದು ವಿಕೋಪಕ್ಕೆ ಹೋಗಿ ತಂದೆಯೇ ಮಗಳ ಪ್ರಾಣ ತೆಗೆಯುವ ಮಟ್ಟಕ್ಕೆ ತಲುಪಿದೆ.
ಘಟನೆಯ ವೇಳೆ ಮನೆಯೊಳಗೆ ಕಿರುಚಾಟದ ಶಬ್ದ ಕೇಳಿ ಅಕ್ಕಪಕ್ಕದ ಮನೆಯವರು ಧಾವಿಸಿ ಬಂದಾಗ, ಜುಮೈರಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ತೀವ್ರ ರಕ್ತಸ್ರಾವದಿಂದಾಗಿ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ಈ ಭೀಕರ ಕೃತ್ಯ ನಡೆಯುವ ಸಮಯದಲ್ಲಿ ತಾಯಿ ಕೂಡ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೆ, ಅಡ್ಡ ಬಂದ ಯುವತಿಯ ದೊಡ್ಡಪ್ಪ ಶೇಕುಂಞ ಅವರಿಗೂ ಆರೋಪಿ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ.
ಕೃತ್ಯದ ನಂತರ ಮಂಜೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿ ಆರೋಪಿ ಉಮ್ಮರ್ ಪಾಷನನ್ನು ವಶಕ್ಕೆ ಪಡೆದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಪೊಲೀಸರು ಮಹಜರು ಪ್ರಕ್ರಿಯೆ ಆರಂಭಿಸಿದ್ದಾರೆ. ಆಸ್ತಿ ಹಂಚಿಕೆಯ ಕಿರಿಕಿರಿ ಒಬ್ಬ ವಿದ್ಯಾರ್ಥಿನಿಯ ಬಲಿ ಪಡೆಯುವ ಮೂಲಕ ತೂಮಿನಾಡು ಪ್ರದೇಶದಲ್ಲಿ ಸ್ಮಶಾನ ಮೌನ ಆವರಿಸುವಂತೆ ಮಾಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









