ಉಡುಪಿ : ಉಡುಪಿಯಲ್ಲಿ ಸರಕಾರಿ ವಸತಿ ಗೃಹಗಳಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಮಧ್ಯಪ್ರದೇಶದ ಬಂಗಡ ಯಾನೆ ಬಾಂಗು ಯಾನೆ ರಮೇಶ್ ಜವಾನ್ ಸಿಂಗ್(37) ಹಾಗೂ ಕಾಲಿಯಾ ಯಾನೆ ಕಾಲು(25) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಜುಲೈ 19ರಂದು ರಾತ್ರಿ ವಸತಿ ಗೃಹದಲ್ಲಿನ ನಾಲ್ಕು ಮನೆಗಳಿಗೆ ನುಗ್ಗಿದ ಕಳ್ಳರು, ಅಪಾರ ಮೌಲ್ಯದ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪರಾರಿಯಾಗಿರುವ ಇನ್ನೊಬ್ಬ ಆರೋಪಿ ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಪ್ರಕರಣದ ತನಿಖೆಗೆ ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜುನಾಥ ಬಡಿಗೇರ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಈ ತಂಡವು ತನಿಖೆಯನ್ನು ತೀವ್ರಗೊಳಿಸಿ, ಉಡುಪಿ ಕರಾವಳಿ ಬೈಪಾಸ್ನ ರಾಷ್ಟ್ರೀಯ ಹೆದ್ದಾರಿ 66 ಬಳಿಯ ಸರ್ಕಸ್ ಗ್ರೌಂಡ್ನಲ್ಲಿನ ಸಿಸಿಟಿವಿ ದೃಶ್ಯಾವಳಿ ಗಳನ್ನು ಪರೀಶೀಲಿಸಿತು. ಇದರಲ್ಲಿ ಮಾಹಿತಿ ಪಡೆದು, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ತಂಡ ಬಂಧಿಸಿದೆ ಎಂದು ತಿಳಿದುಬಂದಿದೆ.
ಬಂಧಿತರಿಂದ ಬೆಳ್ಳಿಯ ಆಭರಣಗಳಾದ ಕಾಲು ಗೆಜ್ಜೆ, ಸೊಂಟದ ನೇವಳ, ಕೈಬಳೆ, ಕಾಲುಂಗುರ, ಸೊಂಟದ ಪಟ್ಟಿ, ಬಟ್ಟಲು, ಕಡಗ ಮತ್ತು ಬ್ರಾಸ್ಲೈಟ್ ಸೇರಿ ಒಟ್ಟು 80,970ರೂ. ಮೌಲ್ಯದ 681.830 ಮಿಲಿ ಗ್ರಾಂ ಬೆಳ್ಳಿಯ ಸೊತ್ತು, 4,250ರೂ. ಮೌಲ್ಯದ 470 ಮಿಲಿಗ್ರಾಂ ಚಿನ್ನ ಹಾಗೂ 1700ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಅಪರಾಧ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









