ಮುಂಬಯಿ : ಬಂಟರ ಸಂಘ ಮುಂಬಯಿ ಹಾಗೂ ಪ್ರಾದೇಶಿಕ ಸಮಿತಿಗಳು ಸೇರಿ ಒಂದು ವರ್ಷಕ್ಕೆ ಕಡಿಮೆಯೆಂದರೆ ನೂರಕ್ಕೂ ಮಿಕ್ಕಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಬಾರದೇ ಇದ್ದವರನ್ನು ಬರುವಂತೆ ಮಾಡಬೇಕು ಹಾಗೂ ಅವರನ್ನು ಖಡ್ಡಾಯವಾಗಿ ಬಂಟರ ಸಂಘದ ಸದಸ್ಯರನ್ನಾಗಿಸಬೇಕು. ಇಂದಿನ ಆಟಿಯ ಕಾರ್ಯಕ್ರಮದಲ್ಲಿ ಮಹಿಳೆಯರು ಅರುವತ್ತಕ್ಕೂ ಮಿಕ್ಕಿದ ವಿವಿಧ ಖಾದ್ಯಗಳನ್ನು ತಮ್ಮ ಮನೆಯಲ್ಲೇ ತಯಾರಿಸಿ ತಂದಿರುತ್ತಾರೆ. ಇದರಿಂದ ಅವರಿಗಿರುವ ಸಮಾಜ ಭಾಂಧವರ ಮೇಲಿನ ಪ್ರೀತಿ ಹಾಗೂ ಜವಾಬ್ದಾರಿಯ ಅರಿವಾಗುತ್ತದೆ. ನಮ್ಮ ತುಳುನಾಡು ದೇವರ ನಾಡು,ತುಳುವರಿಗೆ ಪ್ರಕೃತಿಯ ತಿಂಡಿಗಳು ತುಂಬಾ ಇಷ್ಟ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ ಭೋಜ ಶೆಟ್ಟಿಯವರು ಅಭಿಪ್ರಾಯಪಟ್ಟರು.
ಬಂಟರ ಸಂಘ ಮುಂಬಯಿ ಜೋಗೇಶ್ವರಿ-ದಹಿಸರ್ ಪ್ರಾದೇಶಿಕ ಸಮಿತಿಯ ವತಿಯಿಂದ ಸಮಿತಿಯ ಮಹಿಳಾ ವಿಭಾಗ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗ ಹಾಗೂ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಸಹಯೋಗದೊಂದಿಗೆ, ಆ ೧೦ ರಂದು ಕಾಂದಿವಲಿ ಪೂರ್ವದ ಅವೆನ್ಯೂ ಹೋಟೇಲಿನ ಸಭಾಂಗಣದಲ್ಲಿ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿಕೊಂಡಾಡಿ ಇವರ ನೇತೃತ್ವದಲ್ಲಿ ನಡೆದ “ಆಟಿದ ನೆನೆಪು – ಸ್ಕಿಲ್ಲ್ ಫಾರ್ ಎಂಪ್ಲಾಯ್” ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಮುಂಬಯಿಯಲ್ಲಿರುವ ಬಂಟರೆಲ್ಲರೂ ಬಂಟರ ಸಂಘದ ಸದಸ್ಯರಾಗಿ ಸಂಘದ ಎಲ್ಲಾ ಕಾರ್ಯಕ್ರಮಗಳಿಗೆ ಬಂದು ಭಾಗವಹಿಸುತ್ತಿರಬೇಕು. ಆವಾಗ ಮಾತ್ರ ಬಂಟರ ಸಂಘ ಎಂದರೆ ಏನು? ಅದು ಸಮಾಜ ಬಾಂದವರಿಗಾಗಿ ಏನು ಮಾಡುತ್ತಿದೆ? ಭವಿಷ್ಯದಲ್ಲಿ ಏನೆಲ್ಲಾ ಯೋಜನೆಗಳು ಕಾರ್ಯಗತಗೊಳ್ಳಲಿವೆ ಎಂಬ ಅರಿವು ಮೂಡುತ್ತದೆ. ಮುಂಬಯಿಯಲ್ಲಿ ಸುಮಾರು ಮೂರುವರೆ ಲಕ್ಷ ಬಂಟರಿದ್ದು ಅದರಲ್ಲಿ ಬಂಟರ ಸಂಘದ ಸದಸ್ಯರಾದವರ ಸಂಖ್ಯೆ ತುಂಬಾ ಕಡಿಮೆಯಿದೆ. ಕೋಟ್ಯಾಂತರ ರೂಪಾಯಿಗಳ ಆಸ್ತಿಯಿರುವ ಬಂಟರ ಸಂಘದ ಸದಸ್ಯ ಸಂಪತ್ತು ಹೆಚ್ಚಾಗಬೇಕು ಎಂದರು. ಈ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರ ನೇತೃತ್ವದಲ್ಲಿ ನಿರಂತರವಾಗಿ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳನ್ನು ಸ್ವಾಗತಿಸಿದ ಕ್ರಮವನ್ನು ನೋಡಿದಾಗ, ಊರಿಗೆ ಆಗಮಿಸಿದ ಅನುಭವವಾಯಿತು. ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶ್ರೀಮತಿ ಸುನೀತಾ ನಿತ್ಯಾನಂದ ಹೆಗ್ಡೆಯವರ ಕಾರ್ಯವೈಖರಿಯು ಪ್ರಶಂಸನೀಯ. ನಮ್ಮ ದಾನಿಗಳು ಸಂಘದ ದೊಡ್ಡ ಆಸ್ತಿ, ನಮ್ಮ ಬೊರಿವಲಿ ಶಿಕ್ಷಣ ಸಂಸ್ಥೆಯನ್ನು ಸಂಪೂರ್ಣವಾಗಿ ಲೋಕಾರ್ಪಣೆ ಮಾಡಲು ಸಮಾಜದ ಹಲವಾರು ದಾನಿಗಳು ಕೈ ಜೋಡಿಸಿದ್ದು, ಇನ್ನೂ ಹೆಚ್ಚಿನ ಸಂಖ್ಯೆಯ ದಾನಿಗಳು ಮುಂದೆ ಬರಬೇಕು. ನಗರದ ಪ್ರಮುಖ ಆರ್ಥಿಕ ವ್ಯವಹಾರಗಳ ಸಂಸ್ಥೆ ಇಸ್ಸಾರ್ ಪೈನಾನ್ಶಿಯಲ್ ಗ್ರೂಪ್ ಆಫ್ ಕಂಪನೀಸ್ ನ ಸಿ.ಎಂ.ಡಿ. ಹಾಗೂ ಸಂಜೀವನಿ ಟ್ರಸ್ಟ್ ನ ರೂವಾರಿ ಡಾ. ಅರ್. ಕೆ. ಶೆಟ್ಟಿಯವರು “ಸ್ಕಿಲ್ಲ್ ಫಾರ್ ಎಂಪ್ಲಾಯ್” ಬಗ್ಗೆ ಉತ್ತಮ ಮಾಹಿತಿ ನೀಡಿ, ಇದರ ಸದುಪಯೋಗವನ್ನು ಪಡೆಯಲಿಚ್ಛಿಸುವ ಅಸಾಯಕರಿಗೆ ಸಹಾಯವನ್ನು ನೀಡುವುದಾಗಿ ತಿಳಿಸಿದ್ದು ನಿಜಕ್ಕೂ ಶ್ಲಾಘನೀಯ. ಇದೇ ರೀತಿ ಬಾಬಾಸ್ ಗ್ರೂಪ್ ಆಫ್ ಕಂಪನೀಸ್ ನ ಸಿ.ಎಂ.ಡಿ., ಮಹೇಶ್ ಎಸ್ ಶೆಟ್ಟಿಯರ ಆರೋಗ್ಯಂ ಯೋಜನೆಯಡಿಯಲ್ಲಿ ಯಾವುದೇ ರೀತಿಯ ರೋಗಿಗಳಿಗೆ ಔಷದಿ ಖರೀದಿಸಲು ಹಣಲವಿಲ್ಲದಿದ್ದಲ್ಲಿ ಅಂತಹವರಿಗೆ ಧರ್ಮಾರ್ಥವಾಗಿ ಔಷದಿಯನ್ನು ನೀಡುವ ವ್ಯವಸ್ಥೆಯಿದೆ . ಇಂತಹ ಸಮಾಜ ಸೇವಕರನ್ನು ನಾವು ಪ್ರೋತ್ಸಾಹಿಸಬೇಕು. ನಮ್ಮ ಸಂಘದ ಮುಂದಿನ ಯೋಜನೆಯು ನಗರದಲ್ಲಿ ಬಂಟ ಸಮಾಜದ ಸುಸಜ್ಜಿತ ಆಸ್ಪತ್ರೆಯ ನಿರ್ಮಾಣವಾಗಿರುತ್ತದೆ. ಇದಕ್ಕಾಗಿ ಕೈಜೋಡಿಸಲು ಸಮಾಜದಲ್ಲಿ ಬಹಳಷ್ಟು ಜನ ಕೊಡುಗೈ ದಾನಿಗಳಿದ್ದಾರೆ ಎಂದರು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ, ಸುನೀತಾ ಎನ್ ಹೆಗ್ಡೆಯವರು ಎಲ್ಲರನ್ನು ಸ್ವಾಗತಿಸಿ, ಮುಂಬಯಿ ಬಂಟರ ಸಂಘವೆಂದರೆ ಅದು ನಮ್ಮ ಕುಟುಂಬದ ಮನೆ, ಜೋಗೇಶ್ವರಿ- ದಹಿಸರ್ ಪ್ರಾದೇಶಿಕ ಸಮಿತಿ ನಮ್ಮ ಮನೆ . ಇಲ್ಲಿ ನಾವೆಲ್ಲರೂ ಒಂದೇ ಮನೆಯ ಸದಸ್ಯರಂತೆ ಎಲ್ಲಾ ಕಷ್ಟ ಸುಖಗಳಲ್ಲಿ ಭಾಗಿಗಳಾಗುತ್ತೇವೆ. ಇಂದಿನ ಈ ಕಾರ್ಯಕ್ರಮ ಇಷ್ಟು ಅಚ್ಚುಕಟ್ಟಾಗಿ ಮೂಡಿಬರಲು ಸಹಕರಿಸಿದ ಮಹಿಳಾ ವಿಭಾಗದ ಎಲ್ಲಾ ಪದಾಧಿಕಾರಿಗಳಿಗೆ, ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಹಾಗೂ ಎಲ್ಲಾ ಮಹಿಳಾ ಮಣಿಗಳಿಗೆ ನಾನು ಚಿರಋಣಿ. ನಮ್ಮ ಸಮಿತಿಯಲ್ಲಿ ಎಲ್ಲಾ ಮಹಿಳೆಯರು ಮನೆಯಲ್ಲಿ ತಮ್ಮ ಕುಟುಂಬದ ಜವಾಬ್ದಾರಿಯೊಂದಿಗೆ ಸಮಾಜ ಸೇವೆಯ ಕಾರ್ಯಕ್ರಮಗಳಲ್ಲಿ ನನ್ನೊಂದಿಗೆ ದುಡಿಯುತ್ತಿದ್ದಾರೆ.ಇಂತಹ ಕಾರ್ಯಕ್ರಮಗಳ ಮೂಲಕ ನಾವು ನಮ್ಮ ಹಿರಿಯರು ಪಾಲಿಸಿಕೊಂಡು ಬಂದ ಹಬ್ಬ ಹರಿದಿನಗಳ ಆಚರಣೆ, ರೀತಿ -ರಿವಾಜು , ಕಟ್ಟು ಕಟ್ಟಳೆಗಳನ್ನು ಮುಂದಿನ ಜನಾಂಗಕ್ಕೆ ತಿಳಿಸೋಣ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾದ ಪ್ರೇಮನಾಥ ಶೆಟ್ಟಿ ಕೊಂಡಾಡಿಯವರು ಇಂದಿನ ಕಾರ್ಯಕ್ರಮಕ್ಕೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಮುಖ್ಯವಾಗಿ ಎಲ್ಲಾ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದರು. ಶಿಕ್ಷಣ ಪೂರೈಸಿ ಉದ್ಯೋಗವನ್ನರಸುತ್ತಿರುವ ಮಕ್ಕಳ ಮುಂದಿನ ಜೀವನದ ಬಗ್ಗೆ ಉತ್ತಮ ಮಾರ್ಗದರ್ಶನ ನೀಡಿದ ಡಾ. ಆರ್ ಕೆ ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸುತ್ತ ಸಮಾಜದ ಯುವ ಜನಾಂಗವು ಇದರ ಪ್ರಯೋಜನವನ್ನು ಪಡೆಯಬೇಕೆಂದರು. ನಮ್ಮ ಇಂದಿನ ವಿಶೇಷ ಅತಿಥಿ ನಿತ್ಯಾನಂದ ಹೆಗ್ಡೆಯವರು ಆಟಿಯ ಬಗ್ಗೆ ಸವಿಸ್ತಾರವಾದ ಮಾಹಿತಿ ನೀಡಲಿದ್ದಾರೆ ಎಂದರು. ತಮ್ಮ ಪ್ರಾಸ್ತಾವಿಕ ನುಡಿಗಳ ಕೊನೆಯಲ್ಲಿ ಆಟಿ ಕಳಂಜನ ತುಳು ಪಾಡ್ದನವನ್ನು ಹಾಡಿ ಎಲ್ಲರನ್ನೂ ರಂಜಿಸಿದರು.
ಖ್ಯಾತ ವಾಗ್ಮಿ, ಬಂಟರ ಸಂಘದ ಬೊರಿವಿಲಿ ಶಿಕ್ಷಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಶಿರ್ವ ನಡಿಬೆಟ್ಟು ನಿತ್ಯಾನಂದ ಹೆಗ್ಡೆಯವರು ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದು ಆಟಿಯ ನೆನಪುಗಳ ಬಗ್ಗೆ ಉಪನ್ಯಾಸ ನೀಡಿದರು. ಕೃಷಿ ಪ್ರಧಾನವಾದ ನಮ್ಮ ಜಿಲ್ಲೆಯಲ್ಲಿ ಕೃಷಿಬದುಕು ಈಗ ಮೊದಲಿನಷ್ಟು ಉಳಿದಿಲ್ಲ. ಜೀವನ ಶೈಲಿ ಬದಲಾಗಿದೆ. ನಮ್ಮ ತುಳು ತಿಂಗಳು ಸೌರ ಯುಗಾದಿಯ ನಂತರ ಪ್ರಾರಂಭವಾಗುತ್ತದೆ. ಪಗ್ಗು ಬೇಶ, ಕಾರ್ತೆಲ್ ನಂತರ ಬರುವ ನಾಲ್ಕನೆಯ ತಿಂಗಳು ಆಟಿ. ಕೃಷಿಯೇ ಮುಖ್ಯ ಕಸುಬು ಆಗಿದ್ದ ಆ ಕಾಲದಲ್ಲಿ ಆಟಿ ತಿಂಗಳು ಬಲು ಕಷ್ಟದ ತಿಂಗಳಾಗಿತ್ತು. ವರ್ಷವಿಡೀ ದುಡಿದು ಸಂಗ್ರಹಿಸಿದ ಆಹಾರ ವಸ್ತುಗಳೆಲ್ಲವೂ ಖಾಲಿಯಾಗುತ್ತಿತ್ತು. ಆಟಿ ತಿಂಗಳಲ್ಲಿ ಮಳೆಯು ಹೆಚ್ಚಾಗಿ ಬದುವುದರಿಂದ ಯಾವುದೇ ಶುಭ ಕಾರ್ಯಕ್ರಮ ಮಾಡಲು ಮಳೆಯು ಅಡ್ದಿಯಾಗುತ್ತಿತ್ತು, ಅದಕ್ಕಾಗಿ ಅದನ್ನು ಅಶುಭ ತಿಂಗಳು ಎಂದು ಕರೆದರು. ಆದರೆ ಆಟಿ ತಿಂಗಳು ನಿಜವಾಗಿಯೂ ಶುಭ ಮಾಸ ಅಂತ ಹೇಳಬಹುದು. ನಾವು ಮತ್ತು ನಮ್ಮ ಹಿರಿಯರು ಕೂಡು ಕುಟುಂಬದಲ್ಲಿ ಬೆಳೆದವರು… ನಮ್ಮವರದ್ದು ನಿಸ್ವಾರ್ಥ ಬದುಕು. ಇದ್ದವರು ಇಲ್ಲದವರಿಗೆ ನೀಡಿ ಸಹಕರಿಸುತ್ತಿದ್ದರು. ಎನ್ನುತ್ತಾ ಆಟಿಯ ಬಗ್ಗೆ ವಿವರ ನೀಡಿದರು.
ಕಾರ್ಯಕ್ರಮದ ವಿಶೇಷ ಅತಿಥಿಗಳಾಗಿ ಆಗಮಿಸಿದ ಮಿಸೆಸ್ ಇಂಟರ್ನಾಷನಲ್ 2025” ಸೌಂದರ್ಯ ಸ್ಫರ್ಧೆಯಲ್ಲಿ ಮಿಸೆಸ್ ಟ್ಯಾಲೆಂಟ್ ಬಹುಮಾನ ವಿಜೇತೆ, ಮಧುರಾ ಹರೀಶ್ ಶೆಟ್ಟಿಯವರು ಮಾತನಾಡಿ ಪ್ರತಿಯೊಬ್ಬ ಮಹಿಳೆಯಲ್ಲಿ ತನ್ನದೇ ಆದ ಪ್ರತಿಭೆಯಿದ್ದು ಅದನ್ನು ಮಹಿಳೆಯರು ಪ್ರದರ್ಶಿಸಬೇಕು. ಮಹಿಳೆಯರು ತನ್ನಿಂದ ಅಸಾಧ್ಯ ಎಂಬುದನ್ನು ಬದಿಗಿಟ್ಟು ತಮ್ಮ ಪ್ರತಿಭೆಗೆ ಅವಕಾಶ ಸಿಕ್ಕಿದಲ್ಲಿ ಅದನ್ನು ಸದುಪಯೋಗಿಸಬೇಕು. ಯಾರೂ ಯಾವುದಕ್ಕೂ ಕಡಿಮೆಯಿಲ್ಲ. ಯುವ ಜನಾಂಗವು ಡಾ. ಆರ್.ಕೆ. ಶೆಟ್ಟಿಯವರ ಉದ್ಯೋಗ ಯೋಜನೆಯ ಪ್ರಯೋಜನವನ್ನು ಪಡೆಯಬೇಕೆಂದರು.
ಸಂಘದ ಪಶ್ಚಿಮ ವಲಯದ ಪ್ರಾದೇಶಿಕ ಸಮಿತಿಗಳ ಸಮನ್ವಯಕರಾದ ಖಾಂದೇಶ್ ಭಾಸ್ಕರ್ ಶೆಟ್ಟಿಯವರು ಮಾತನಾಡುತ್ತಾ ತುಳುನಾಡಿನ ಎಲ್ಲಾ ಸಂಸ್ಕೃತಿಯಲ್ಲಿ ಒಂದು ವಿಶೇಷವಾದ ಸಂಸ್ಕೃತಿ ಆಟಿಯ ಕಾರ್ಯಕ್ರಮ. ಸಂಸ್ಕೃತಿ ಸಂಸ್ಕಾರದ ನೆಲೆವೀಡು ನಮ್ಮ ತುಳುನಾಡು. 60 ಬಗೆಯ ತಿಂಡಿಗಳನ್ನು ತಯಾರಿಸಿ ತಂದ ಎಲ್ಲಾ ಮಹಿಳೆಯರಿಗೆ ಅಭಿನಂದನೆ ಸಲ್ಲಿಸಿದರು. ಯುವಕರ ಬಗ್ಗೆ ಮಾತನಾಡಿದ ಅವರು ಯುವಕರು ಸದಾ ಪ್ರಯತ್ನಶೀಲರಾಗಿ ಹಂತ ಹಂತವಾಗಿ ತಮ್ಮ ಜೀವನದಲ್ಲಿ ಮೇಲೇರುವಂತಾಗಬೇಕು ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿ , ಸ್ಕಿಲ್ಲ್ ಫಾರ್ ಎಂಪ್ಲಾಯ್ ಬಗ್ಗೆ ಮಾಹಿತಿ ನೀಡುತ್ತಾ ಡಾ. ಆರ್. ಕೆ. ಶೆಟ್ಟಿ ಯವರು ನಮ್ಮ ಯುವಕರು ಉತ್ತಮ ಶಿಕ್ಷಣ ಪಡೆದು ಅವರ ಶಿಕ್ಷಣಕ್ಕೆ ತಕ್ಕ ನೌಕರಿ ಸಿಗದೇ ಇರುವುದು ನಮ್ಮ ಯುವ ಜನಾಂಗದ ಇಂದಿನ ಸಮಸ್ಯೆ ಯಾಗಿದೆ. ನಮ್ಮ ಮಕ್ಕಳಿಗೆ ಉತ್ತಮ ಕೆಲಸ ಸಿಗಬೇಕು ಎಂಬುದೇ ಅವರ ಹೆತ್ತವರ ಆಸೆಯಾಗಿರುತ್ತದೆ. ನಮ್ಮ ಮಕ್ಕಳಿಗೆ ದಾನಿಗಳು ಹಾಗೂ ನಮ್ಮ ಸಂಘದ ಸಹಾಯದಿಂದ ಉತ್ತಮ ಶಿಕ್ಷಣ ಹೇಗಾದರೂ ಸಿಗುತ್ತದೆ.ಆದರೆ ಅವರಿಗೆ ಅನುಭವವಿಲ್ಲದಿದ್ದಲಿ ಅವರ ಶಿಕ್ಷಣಕ್ಕೆ ತಕ್ಕ ಕೆಲಸ ಸಿಗುವುದಿಲ್ಲ. ಹೀಗೆ ಕಲಿತ ಮಕ್ಕಳು ಕೆಲಸ ಸಿಗದೇ ಉದ್ಯೋಗ ವಂಚಿತರಾಗುತ್ತಿರುವುದು ಇಂದು ಎಲ್ಲಾ ಯುವ ಜನಾಂಗದ ಹಾಗೂ ಇಡೀ ದೇಶದ ಸಮಸ್ಯೆ . ಇದಕ್ಕಾಗಿ ನಮ್ಮ ಕೇಂದ್ರ ಸರಕಾರವು ಸ್ಕಿಲ್ ಇಂಡಿಯಾ ಯೋಜನೆಯೊಂದನ್ನು ಪ್ರಾರಂಭಸಿದ್ದು ಇದನ್ನು ಟಾಟಾ ಐ ಐ ಎಸ್ ಸಂಸ್ಥೆಯು ಮುಂದುವರಿಸಿಕೊಂಡು ಹೋಗುತ್ತಿದ್ದು. ಕಲಿತು ಉದ್ಯೋಗವನ್ನರಸುತ್ತಿರುವ ಮಕ್ಕಳಿಗೆ ಈ ಸಂಸ್ಥೆಯಲ್ಲಿ ತರಬೇತಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಇದನ್ನರಿತು ನಮ್ಮ ಸಂಜೀವಿನಿ ಟ್ರಷ್ಟ್ ಈ ಸಂಸ್ಥೆಯೊಂದಿಗೆ ಒಡಂಬಡಿಕೆ (ಎಂ.ಓ.ಯು) ಮಾಡಿ ನಮ್ಮ ಸಮಾಜದ ಮಕ್ಕಳಿಗೆ ಇದರಲ್ಲಿ ತರಬೇತಿ ನೀಡಿ ಅವರಿಗೆ ಕೆಲಸ ಸಿಗುವಂತೆ ಮಾಡುವ ವ್ಯವಸ್ಥೆ ಇದಾಗಿದೆ. ಈ ಬಗ್ಗೆ ಸಮಾಜದ ಆಸಕ್ತ ಹಾಗೂ ಅರ್ಹ ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ಹಾಗೂ ಸಹಾಯವನ್ನು ನಾವು ಮಾಡಲಿದ್ದು ಬಂಟ ಸಮಾಜದ ಎಲ್ಲಾ ಮಕ್ಕಳು ಇದರ ಪ್ರಯೋಜನವನ್ನು ಪಡೆಯಬಹುದು, ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರ ಮೂಲಕ ಸಂಪರ್ಕಿಸಬಹುದು ಎಂದು ತಿಳಿಸಿದರು.
ಬಂಟರ ಸಂಘದ ಬೊರಿವಲಿ ಶಿಕ್ಷಣ ಸಂಸ್ಥೆಗಳ ಧನ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷರಾದ ಮುಂಡಪ್ಪ ಎಸ್. ಪಯ್ಯಡೆಯವರು ಮಾತನಾಡುತ್ತಾ ನಮ್ಮ ಬೊರಿವಲಿ ಶಿಕ್ಷಣ ಸಂಸ್ಥೆಯ ಯೋಜನೆಗೆ ಎಲ್ಲರೂ ಸಾದ್ಯವಾದಷ್ಟು ಸಹಾಯ ಮಾಡುವಂತಾಗಲಿ ಎಂದರು. ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರು ಮನೆಗೆ ಬೆಳಕನ್ನು ನೀಡುವವರು. ಸಂಸಾರವನ್ನು ಉತ್ತಮವಾಗಿ ನಡೆಸುವಲ್ಲಿ ಮಹಿಳೆಯ ಪಾತ್ರ ಮಹತ್ವದ್ದು. ಮಕ್ಕಳು ನಮ್ಮ ನಾಡಿನ ಆಟಿಯ ತಿಂಡಿಯನ್ನು ಸೇವಿಸುವ ಅಗತ್ಯವಿದೆ. ಆಗ ಅವರಿಗೆ ಆಟಿ ತಿಂಗಳ ಅರಿವಾಗುತ್ತದೆ. ನಮ್ಮ ಮುಂದಿನ ಪೀಳಿಗೆಗೆ ಕಷ್ಟವಾಗದ ರೀತಿಯಲ್ಲಿ ನಾವು ಜೀವನವನ್ನು ನಡೆಸಬೇಕು. ಆರೋಗ್ಯಕರ ನೆಮ್ಮದಿಯ ಬದುಕು ನಮ್ಮೆಲ್ಲರದಾಗಲಿ ಎಂದರು. ಕಾರ್ಯಕ್ರಮದಲ್ಲಿ ಬಂಟರ ಸಂಘದ , ವಿವಿಧ ಪ್ರಾದೇಶಿಕ ಸಮಿತಿಗಳ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರುಗಳು, ಮಾಜಿ ಕಾರ್ಯಾಧ್ಯಕ್ಷರುಗಳು ಹಾಗೂ ಸಮಾಜದ ಗಣ್ಯರು ಹೆಚ್ಚಿನ ಸಂಖ್ಯಯಲ್ಲಿ ಉಪಸ್ಥಿತರಿದ್ದರು
ಸಾಂಸ್ಕೃತಿಕ ಕಾರ್ಯಕ್ರಮವನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಎಸ್ ಶೆಟ್ಟಿ ನಡೆಸಿಕೊಟ್ಟರು.ಮಹಿಳಾ ವಿಭಾಗದ ಸಂಚಾಲಕಿ ಶೈಲಜಾ ಎ ಶೆಟ್ಟಿ, ರಜನಿ ಆರ್ ಶೆಟ್ಟಿ ಹಾಗೂ ಜಯಲಕ್ಷ್ಮಿ ಪಿ ಶೆಟ್ಟಿಯವರು ತುಳು ಹಾಡುಗಳನ್ನು ಹಾಡಿ ಎಲ್ಲರನ್ನೂ ರಂಜಿಸಿದರು. ಪುಟ್ಟ ಬಾಲಕ ಮಾಹಿನ್ ಶೆಟ್ಟಿ ತುಳುನಾಡಿನ ಸಾಂಪ್ರದಾಯಿಕ ಉಡುಗೆಯಲ್ಲಿ ಬಂದು ಆಟಿಯ ವಿಶೇಷತೆಯ ಬಗ್ಗೆ ಕಿರು ಉಪನ್ಯಾಸವನ್ನು ನೀಡಿ ಎಲ್ಲರ ಗಮನ ಸೆಳೆದನು. ಆಟಿಯ ಎಲ್ಲ ಖಾದ್ಯಗಳು ಹಾಗೂ ಅದನ್ನು ತಯಾರಿಸಿದವರ ಹೆಸರುಗಳನ್ನೊಳಗೊಂಡ ಶೈಲಜಾ ಎ ಶೆಟ್ಟಿಯವರು ರಚಿಸಿ ತನ್ನ ತಂಡದವರೊಂದಿಗೆ ಹಾಡಿದ ತುಳು ಹಾಡು ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಉಪಾಧ್ಯಕ್ಷರಾದ ಮಹೇಶ್ ಎಸ್ ಶೆಟ್ಟ, ಗೌ. ಕೋಶಾಧಿಕಾರಿ ಸಿಎ ರಮೇಶ್ ಬಿ. ಶೆಟ್ಟಿ, ಜೊತೆಕಾರ್ಯದರ್ಶಿ ಗಿರೀಶ್ ಆರ್. ಶೆಟ್ಟಿ ತೆಲ್ಲಾರ್, ಮಹಿಳಾ ವಿಭಾಗದ ಕಾರ್ಯಾದರ್ಶಿ ಆಶಾ ಸುಧೀರ್ ಶೆಟ್ಟಿ, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಗಂಗಾಧರ ಎ. ಶೆಟ್ಟಿ, ಕಾರ್ಯದರ್ಶಿ ರಮೇಶ್ ಎಂ ಶೆಟ್ಟಿ,ಕೋಶಾಧಿಕಾರಿ ಅವಿನಾಶ್ ಎಂ ಶೆಟ್ಟಿ, ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಜಿ ಶೆಟ್ಟ, ಕೋಶಾಧಿಕಾರಿ ಶುಭಾಂಗಿ ಎಸ್ ಶೆಟ್ಟಿ, ಜತೆ ಕಾರ್ಯದರ್ಶಿ ಯೋಗಿನಿ ಎಸ್ ಶೆಟ್ಟಿ, ಜೊತೆ ಕೋಶಾಧಿಕಾರಿ ಪ್ರಭಾವತಿ ಹೆಚ್ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು. ಮುಖ್ಯ ಸಲಹೆಗಾರರಾದ ಮನೋಹರ ಎನ್. ಶೆಟ್ಟಿ, ನಿತ್ಯಾನಂದ ಹೆಗ್ಡೆ, ವಿಜಯ ಆರ್. ಭಂಡಾರಿ ಮತ್ತು ರವೀಂದ್ರ ಎಸ್. ಶೆಟ್ಟಿ ಮತ್ತು ಎರ್ಮಾಳ್ ಹರೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿ ಜಯ ಶೆಟ್ಟಿ , ಜತೆ ಕೋಶಾಧಿಕಾರಿ ರಮೇಶ್ ಹೆಚ್ ಶೆಟ್ಟಿಯವರು ಸಹಕರಿಸಿದರು..
ಸಂಪೂರ್ಣ ಸಭಾ ಕಾರ್ಯಕ್ರಮವನ್ನು ರಘುನಾಥ ಎನ್ ಶೆಟ್ಟಿ , ಕಾಂದಿವಲಿ ನಿರೂಪಿಸಿದರು. ಭಾರತಿ ಶೆಟ್ಟಿ ಪ್ರಾರ್ಥನೆ ಹಾಡಿದರು. ಮಹಿಳಾ ವಿಭಾಗದ ಕಾರ್ಯದರ್ಶಿ ಸರಿತಾ ಎಂ ಶೆಟ್ಟಿ ಆಭಾರ ಮನ್ನಿಸಿದರು. ರೋಹಿತ್ ಶೆಟ್ಟಿ, ಸಮೀಕ್ಷಾ ಶೆಟ್ಟಿ, ವಿಭಾ ಶೆಟ್ಟಿ ಹಾಗೂ ಪ್ರಜ್ವಲ್ ಶೆಟ್ಟಿ ಹಿನ್ನಲೆಯಲ್ಲಿ ಸಹಕರಿಸಿದರು. ಬಂಟರ ಸಂಘದ ಬೊರಿವಲಿ ಶಿಕ್ಷಣ ಸಂಸ್ಥೆಯ ಕೋ.ಕನ್ವೇನರ್ ಅಶೋಕ್ ವಿ ಶೆಟ್ಟಿಯವರು ಮಾರ್ಗದರ್ಶನವಿತ್ತರು.
ವರದಿ : ಈಶ್ವರ ಎಂ. ಐಲ್
ಚಿತ್ರ : ಪ್ರತೀಕ್ ರವಿ ಶೆಟ್ಟಿ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಪ್ರಾದೇಶಿಕ ಸುದ್ದಿಗಳು









