ಮಂಗಳೂರು : ಕಾರ್ಗಿಲ್ ವಿಜಯ್ ದಿವಸ್ ಅಂಗವಾಗಿ, 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಮಹತ್ವದ ಪಾತ್ರ ವಹಿಸಿದ್ದ ಭಾರತೀಯ ಸೇನೆಯ ಐತಿಹಾಸಿಕ ‘ಟಿ-55’ ಯುದ್ಧ ಟ್ಯಾಂಕ್ ಅನ್ನು ಮಂಗಳೂರಿನ ಕದ್ರಿ ಹಿಲ್ಸ್ನಲ್ಲಿರುವ ಯುದ್ಧ ಸ್ಮಾರಕದ ಆವರಣದಲ್ಲಿ ರವಿವಾರ ಅಧಿಕೃತವಾಗಿ ಸಾರ್ವಜನಿಕ ಪ್ರದರ್ಶನಕ್ಕೆ ಮುಕ್ತಗೊಳಿಸಲಾಯಿತು. ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಈ ಟ್ಯಾಂಕ್ ಅನ್ನು ಅನಾವರಣಗೊಳಿಸಿ, “ಈ ಟ್ಯಾಂಕ್ ನಮ್ಮ ಸೈನಿಕರ ಅಪ್ರತಿಮ ಶೌರ್ಯ, ತ್ಯಾಗ ಮತ್ತು ದೇಶಸೇವೆಯ ಜೀವಂತ ಸಂಕೇತವಾಗಿದೆ. ಸಾರ್ವಜನಿಕರು ಹಾಗೂ ಯುವಜನತೆ ಇಲ್ಲಿಗೆ ಭೇಟಿ ನೀಡಿ ಸೇನಾ ಪರಂಪರೆಯಿಂದ ಪ್ರೇರಣೆ ಪಡೆಯಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ಹಿರಿಯ ಸೇನಾಧಿಕಾರಿ ಬ್ರಿಗೇಡಿಯರ್ ಐ.ಎನ್. ರೈ, 1971ರ ಬಾಂಗ್ಲಾ ವಿಮೋಚನಾ ಯುದ್ಧ ಹಾಗೂ ಶ್ರೀಲಂಕಾದಲ್ಲಿನ ಐಪಿ ಕೆಎಫ್ (IPKF) ಕಾರ್ಯಾಚರಣೆಗಳ ನೆನಪುಗಳನ್ನು ಹಂಚಿಕೊಂಡರೆ, ದಕ್ಷಿಣ ಕನ್ನಡ ಮಾಜಿ ಸೈನಿಕರ ಸಂಘದ ಮಾಜಿ ಅಧ್ಯಕ್ಷ ಕರ್ನಲ್ ಎನ್. ಶರತ್ ಭಂಡಾರಿ ಕಾರ್ಗಿಲ್ ಸಮರದ ಕುರಿತು ವಿವರಣೆ ನೀಡಿದರು. ಇದೇ ವೇಳೆ ದೇಶದ ರಕ್ಷಣೆಗಾಗಿ ಪ್ರಾಣಾರ್ಪಣೆ ಮಾಡಿದ ಧೀರ ಯೋಧರಿಗೆ ಪುಷ್ಪನಮನ ಸಲ್ಲಿಸಲಾಯಿತು.
ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಬಾಳ ಸ್ವಾಗತಿಸಿದರೆ, ಕ್ಯಾಪ್ಟನ್ ದೀಪಕ್ ಅಡ್ಯಂತಾಯ ವಂದಿಸಿದರು. ವಿಕ್ರಂ ದತ್ ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಶಾಸಕ ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಸಂಘದ ಪದಾಧಿಕಾರಿಗಳಾದ ಕರ್ನಲ್ ಎ.ಕೆ. ಜಯಚಂದ್ರನ್ ಮತ್ತು ಸಿಪಿಒ ಸುಧೀರ್ ಪೈ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು










