ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ವಿಸ್ತರಣೆಗೆ ಭೂ ಸ್ವಾಧೀನಕ್ಕೆ ರಾಜ್ಯ ಸರಕಾರಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರ ಮನವಿ ಮಾಡಿದ್ದು ರಾಜ್ಯ ಸರಕಾರಕ್ಕೆ ಇದರಲ್ಲಿ ಯಾವುದೇ ಪಾಲುದಾರಿಕೆ ಇಲ್ಲ, ಹೀಗಾಗಿ ರನ್ ವೇ ವಿಸ್ತರಣೆಗೆ ಭೂ ಸ್ವಾಧೀನವನ್ನು ಅದಾನಿ ಕಂಪೆನಿಯವರೆಗೆ ನಡೆಸಬೇಕಾಗಿದೆ ಎಂದು ವಿಧಾನ ಪರಿಷತ್ ಶಾಸಕರಾದ ಐವನ್ ಡಿಸೋಜ ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇಯನ್ನು150 ಮೀ. ವಿಸ್ತರಿಸಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದ್ದು, ಇದಕ್ಕೆ 32.97 ಎಕರೆ ಜಾಗ ಒದಗಿಸುವಂತೆ ರಾಜ್ಯ ಸರಕಾರಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರ ಮನವಿ ಮಾಡಿದೆ. ವಿಮಾನ ನಿಲ್ದಾಣದಿಂದ ರಾಜ್ಯ ಸರಕಾರಕ್ಕೆ ಯಾವುದೇ ಪಾಲು ಸಿಗದ ಹಿನ್ನೆಲೆ ಪ್ರಾಧಿಕಾರ ಹಾಗೂ ಗುತ್ತಿಗೆ ವಹಿಸಿಕೊಂಡಿರುವ ಅದಾನಿ ಕಂಪೆನಿ ಭೂ ಸ್ವಾಧೀನ ವೆಚ್ಚವನ್ನು ಭರಿಸಬೇಕು ಎಂದು ಸರಕಾರ ತಿಳಿಸಿದ್ದು, ಪ್ರಾಧಿಕಾರ ಅದಾನಿ ಸಂಸ್ಥೆಗೆ ಭೂ ಸ್ವಾಧೀನ ವೆಚ್ಚ ಭರಿಸಲು ತಿಳಿಸಿದೆ. ಭೂಮಿ ಕಳೆದುಕೊಳ್ಳುವವರಿಗೆ ಸೂಕ್ತ ಪರಿಹಾರ, ಉದ್ಯೋಗ ಹಾಗೂ ವಸತಿ ವ್ಯವಸ್ಥೆಯನ್ನುಕಂಪೆನಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಹೇಳಿದರು.
ರಾಜ್ಯದ ಎರಡನೇ ದೊಡ್ಡ ಅಂತರರಾಷ್ಟೀಯ ವಿಮಾನ ನಿಲ್ದಾಣವಾಗಿದ್ದರೂ, ಮಂಗಳೂರು ವಿಮಾನ ನಿಲ್ದಾಣದಲ್ಲಿ ಸಮರ್ಪಕ ಬೆಳಕಿನ ಕೊರತೆ ಇದೆ. ಪ್ರತಿಕೂಲ ಹವಾಮಾನ ಇದ್ದಲ್ಲಿ ವಿಮಾನಗಳನ್ನು ಇಳಿಸಲು ಸಾಧ್ಯವಾಗುತ್ತಿಲ್ಲ. ದೊಡ್ಡ ಗಾತ್ರದ ಬೋಯಿಂಗ್ ವಿಮಾನಗಳು ಮಂಗಳೂರಿಗೆ ಆಗಮಿಸುತ್ತಿಲ್ಲ. ಈ ಸಮಸ್ಯೆಗೆ ಪ್ರಾಧಿಕಾರ ಹಾಗೂ ಕಂಪೆನಿ ಪರಿಹಾರ ಕೈಗೊಳ್ಳಬೇಕು ಎಂದರು. ಮಂಗಳೂರು ಟೇಬಲ್ ಟಾಪ್ ವಿಮಾನ ನಿಲ್ದಾಣವಾಗಿರುವ ಕಾರಣದಿಂದ ವಿವಿಧ ಸಮಸ್ಯೆಗಳಾಗುತ್ತಿದ್ದು, ಹಿಂದಿನ ಬೇಡಿಕೆಯಂತೆ ಪಡುಬಿದ್ರೆ, ಪಲಿಮಾರು ಭಾಗದಲ್ಲಿರುವ ಸರಕಾರಿ ಜಾಗದಲ್ಲಿ ಉಭಯ ಜಿಲ್ಲೆಗೆ ಆನುಕೂಲವಾಗುವಂತೆ ವಿಮಾನ ನಿಲ್ದಾಣ ನಿರ್ಮಿಸುವ ಅಗತ್ಯವಿದೆ. ಇದಕ್ಕಾಗಿ ಉಭಯ ಜಿಲ್ಲೆಯ ಸಂಸದರು ಕೇಂದ್ರಕ್ಕೆ ಒತ್ತಡ ಹಾಕಬೇಕಿದೆ ಎಂದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









