ಮಂಗಳೂರು: ಆರೆಸ್ಸೆಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ್ದಾರೆನ್ನಲಾದ “ಹಿಂದೂ ಧರ್ಮವೂ ನೋಂದಣಿ ಆಗಿಲ್ಲ” ಎಂಬ ಹೇಳಿಕೆಯನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗೂ ವಿಧಾನಪರಿಷತ್ ಶಾಸಕರು ಆದ ಮಂಜುನಾಥ ಭಂಡಾರಿ ಅವರು ತೀವ್ರವಾಗಿ ಖಂಡಿಸಿದ್ದಾರೆ. ಈ ಹೇಳಿಕೆಯು ಹಿಂದೂ ಧರ್ಮಕ್ಕೆ ಮಾಡಿದ ಘೋರ ಅಪಮಾನ ಎಂದು ಭಂಡಾರಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೂರು ವರ್ಷದ ಇತಿಹಾಸವಿರುವ ಆರೆಸ್ಸೆಸ್ ಅನ್ನು ಸಾವಿರಾರು ವರ್ಷಗಳ ಇತಿಹಾಸವಿರುವ ಹಿಂದೂ ಧರ್ಮದೊಂದಿಗೆ ತುಲನೆ ಮಾಡುವುದು ಸಂಪೂರ್ಣವಾಗಿ ಖಂಡನೀಯ. ಭಾಗವತ್ ಅವರು ಹಿಂದೂ ಧರ್ಮವನ್ನು ನೋಂದಾಯಿತವಲ್ಲದ ಒಂದು “ಸಂಸ್ಥೆ” ಅಥವಾ “ಸಂಘಟನೆ”ಗೆ ಹೋಲಿಕೆ ಮಾಡುವ ಮೂಲಕ, ವೈವಿಧ್ಯತೆಯಲ್ಲಿ ಏಕತೆಯನ್ನು ಮೂಲಮಂತ್ರವಾಗಿ ಹೊಂದಿರುವ ಹಿಂದೂ ಧರ್ಮಕ್ಕೆ ಅವಮಾನ ಮಾಡಿದ್ದಾರೆ ಎಂದು ಮಂಜುನಾಥ ಭಂಡಾರಿ ಅವರು ಹೇಳಿದ್ದಾರೆ.
ಹಿಂದೂ ಧರ್ಮವು ಲಕ್ಷಾಂತರ ವರ್ಷಗಳಿಂದ ಈ ನೆಲದ ಮೂಲನಿವಾಸಿಗಳ ಜೀವನಶೈಲಿ, ಸಂಸ್ಕೃತಿ ಮತ್ತು ನಂಬಿಕೆಗಳ ಸಮಗ್ರ ರೂಪವಾಗಿದೆ. ನೂರಾರು ಪೀಳಿಗೆಗಳ ಅನುಭವ, ತತ್ತ್ವ ಮತ್ತು ಆಚರಣೆಗಳಿಂದ ಬೆಳೆದ ಈ ಧರ್ಮವು ಯಾರೊಬ್ಬರ “ನೋಂದಣಿಯ” ಅಗತ್ಯವಿಲ್ಲದೆ ಶಾಶ್ವತವಾಗಿ ನೆಲೆಗೊಂಡಿದೆ ಎಂದು ಅವರು ವಿವರಿಸಿದರು. ವಿಶ್ವಮಾನ್ಯವಾದ ಹಿಂದೂ ಧರ್ಮ ಮತ್ತು ಕೇವಲ ಒಂದು ಗುಂಪು ಮಾತ್ರ ಒಪ್ಪುವ ಆರೆಸ್ಸೆಸ್ ಅನ್ನು ಒಂದೇ ತಕ್ಕಡಿಯಲ್ಲಿ ತೂಗುವುದು ಹಾಸ್ಯಾಸ್ಪದ ಎಂದು ಭಂಡಾರಿ ತಿಳಿಸಿದರು.
ಅಲ್ಲದೆ, ಆರೆಸ್ಸೆಸ್ ಗುಪ್ತ ಕಾರ್ಯಸೂಚಿ ಹೊಂದಿರುವ ಒಂದು ಖಾಸಗಿ ಸಂಘಟನೆ ಎಂಬುದು ಅದು ಮೂರು ಬಾರಿ ನಿಷೇಧಕ್ಕೊಳಗಾಗುವ ಮೂಲಕ ಸಾಬೀತಾಗಿದೆ ಎಂದು ಭಂಡಾರಿ ಆರೋಪಿಸಿದರು. ಪ್ರಜಾಪ್ರಭುತ್ವದ ಸಂವಿಧಾನಕ್ಕೆ ಬದ್ಧವಾಗಿರುವ ಯಾವುದೇ ಕಾನೂನುಬದ್ಧ ನೋಂದಣಿಯಿಲ್ಲದೆ ಆರೆಸ್ಸೆಸ್ ದೇಶದ ರಾಜಕೀಯ, ಆಡಳಿತ, ಶಿಕ್ಷಣ ಮತ್ತು ಧರ್ಮ ಸೇರಿದಂತೆ ಎಲ್ಲ ಕ್ಷೇತ್ರಗಳ ಮೇಲೆ ಕೆಟ್ಟ ಪ್ರಭಾವ ಬೀರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









