ಬೆಳ್ತಂಗಡಿ: ನಾರವಿ ಗ್ರಾಮದ ಕುತ್ಲೂರಿನಲ್ಲಿ ನಡೆದ ಮನೆಯ ಕಳ್ಳತನ ಪ್ರಕರಣದ ತನಿಖೆಯಲ್ಲಿ ಯಶಸ್ಸು ಕಂಡ ವೇಣೂರು ಪೊಲೀಸರು, ಆರೋಪಿಯೊಬ್ಬನನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಯನ್ನು ಇತ್ತೆ ಬರ್ಪೆ ಅಬೂಬಕರ್ (71) ಎಂದು ಗುರುತಿಸಲಾಗಿದೆ.
ಕುತ್ಲೂರಿನ ಮಂಜು ಶ್ರೀ ನಗರದ ಶಿಕ್ಷಕರಾದ ಅವಿನಾಶ್ ಅವರ ಮನೆಯಲ್ಲಿ ಅಕ್ಟೋಬರ್ 2 ಮತ್ತು 6ರ ನಡುವೆ ಕಳ್ಳತನ ನಡೆದಿತ್ತು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭವನ್ನು ಬಳಸಿಕೊಂಡ ಕಳ್ಳರು, ಸುಮಾರು 9.5 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಿದ್ದರು. ಈ ಬಗ್ಗೆ ಅವಿನಾಶ್ ಅವರು ವೇಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ಆಧಾರದ ಮೇಲೆ ತನಿಖೆ ಆರಂಭಿಸಿದ ವೇಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ವಾಮನ ಮತ್ತು ತಂಡವು ನವೆಂಬರ್ 11ರ ರಾತ್ರಿ ಕಾರ್ಯಪ್ರವೃತ್ತರಾದರು. ವೇಣೂರು ಕುಂಭಶ್ರೀ ಬಳಿ ವಾಹನ ತಪಾಸಣೆ ಮಾಡುವಾಗ ಅನುಮಾನಾಸ್ಪದವಾಗಿ ಸ್ಕೂಟರ್ನಲ್ಲಿ ಬರುತ್ತಿದ್ದ ಅಬೂಬಕರ್ನನ್ನು ತಡೆದು ವಿಚಾರಿಸಲಾಯಿತು.
ವಾಹನ ಮತ್ತು ವ್ಯಕ್ತಿಯ ಪರಿಶೀಲನೆ ವೇಳೆ, ಆತ ಮಂಗಳೂರಿನಲ್ಲಿಯೂ ಕಳ್ಳತನಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಹೆಚ್ಚಿನ ವಿಚಾರಣೆಗಾಗಿ ಅಬೂಬಕರ್ನನ್ನು ಪೊಲೀಸ್ ಠಾಣೆಗೆ ಕರೆತಂದು ಪ್ರಶ್ನಿಸಿದಾಗ, ನಾರವಿಯ ಕುತ್ಲೂರಿನಲ್ಲಿರುವ ಶಿಕ್ಷಕ ಅವಿನಾಶ್ ಅವರ ಮನೆಯಲ್ಲಿ ತಾನೇ ಕಳ್ಳತನ ಮಾಡಿರುವುದನ್ನು ಆತ ಒಪ್ಪಿಕೊಂಡಿದ್ದಾನೆ.
ಬಂಧಿತ ಆರೋಪಿಯನ್ನು ನವೆಂಬರ್ 12ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಯನ್ನು ಹೆಚ್ಚಿನ ವಿಚಾರಣೆಗಾಗಿ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ವಹಿಸಿದೆ. ಅಬೂಬಕರ್ ಈ ಹಿಂದೆ ಉಡುಪಿ ಜಿಲ್ಲೆಯ ಶಿರ್ವದಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ, ಎರಡು ತಿಂಗಳು ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಎನ್ನಲಾಗಿದೆ.
ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ಅವರ ಮಾರ್ಗದರ್ಶನದಲ್ಲಿ ಸಬ್ ಇನ್ಸ್ಪೆಕ್ಟರ್ ವಾಮನ ಮತ್ತು ಅವರ ತಂಡ ಈ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಿರ್ವಹಿಸಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









