ಮಂಗಳೂರಿನ ಅಟಲ್ ಸೇವಾ ಕೇಂದ್ರದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತು ಮಂಗಳೂರು ಮಹಾನಗರ ಪಾಲಿಕೆ (ಮನಪಾ) ಆಡಳಿತ ವೈಫಲ್ಯಗಳ ವಿರುದ್ಧ ಹರಿಹಾಯ್ದರು. ನಗರದ ಮೂಲಭೂತ ಸಮಸ್ಯೆಗಳಿಂದ ಹಿಡಿದು ನೀತಿ ವಿಷಯಗಳವರೆಗೆ ಹಲವು ಗಂಭೀರ ವಿಷಯಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪಿಸಿದರು.
ನಗರಕ್ಕೆ ನೀರು ಪೂರೈಸುವ ಕೊಳವೆ ಒಡೆದು ಮೂರ್ನಾಲ್ಕು ದಿನ ಕಳೆದಿದ್ದರೂ ದುರಸ್ತಿ ಕಾರ್ಯ ಕೈಗೊಳ್ಳದೆ ಜನಸಾಮಾನ್ಯರಿಗೆ ತೀವ್ರ ತೊಂದರೆ ನೀಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಅಧೀನದಲ್ಲಿರುವ ಮನಪಾದ ನಿರ್ಲಕ್ಷ್ಯವನ್ನು ಅವರು ಖಂಡಿಸಿದರು. ಲಕ್ಷಾಂತರ ಜನರಿಗೆ ಕುಡಿಯುವ ನೀರಿಲ್ಲದಿದ್ದರೂ ಪರ್ಯಾಯ ವ್ಯವಸ್ಥೆ ಮಾಡದಿರುವುದು ಈ ಸರ್ಕಾರದ ಬೇಜವಾಬ್ದಾರಿಯ ಪರಮಾವಧಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರು ಆಯುಷ್ನಲ್ಲಿ ಔಷಧ ಖರೀದಿಯಲ್ಲಿ ಭಾರೀ ಅಕ್ರಮ ನಡೆದಿದ್ದು, ಅಧಿಕಾರಿಗಳು ಹಣಕ್ಕಾಗಿ ಅವಧಿ ಮೀರಿದ ಔಷಧ ಪೂರೈಕೆ ಮಾಡಿ ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟವಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಈ ಬಗ್ಗೆ ದಾಖಲೆಗಳ ಸಮೇತ ಜಿಲ್ಲಾಧಿಕಾರಿಗಳ ಮತ್ತು ಕೆಡಿಪಿ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ. ಯಾರನ್ನು ರಕ್ಷಿಸಲು ಇಲ್ಲಿ ಹುನ್ನಾರ ನಡೆಯುತ್ತಿದೆ ಮತ್ತು ಇದರ ಹಿಂದೆ ಯಾರಿದ್ದಾರೆ ಎಂದು ಪ್ರಶ್ನಿಸಿದ ಶಾಸಕರು, ಲೋಕಾಯುಕ್ತ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ಮುಂದುವರಿದರೆ ಕಾಣದ ಕೈಗಳು ಹೊರಬರುವ ವಿಶ್ವಾಸ ವ್ಯಕ್ತಪಡಿಸಿದರು.
ಯಕ್ಷಗಾನ ಕಲಾವಿದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ಕ್ಷಮೆ ಮಾತ್ರವಲ್ಲದೆ, ಕೂಡಲೇ ಅವರನ್ನು ಆ ಸ್ಥಾನದಿಂದ ವಜಾಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಯಕ್ಷಗಾನವು ಕರಾವಳಿ ಕರ್ನಾಟಕದ ಭಕ್ತಿ ಮತ್ತು ಸಂಸ್ಕೃತಿಯ ಭಾಗವಾಗಿದ್ದು, ಇಂತಹ ಪರಂಪರೆಗೆ ಎಡಪಂಥೀಯ ಬುದ್ದಿಜೀವಿಗಳು ಅವಮಾನ ಮಾಡುವುದು ಇಡೀ ಹಿಂದೂ ಸಮಾಜಕ್ಕೆ ನೋವುಂಟು ಮಾಡಿದೆ ಎಂದು ಖಂಡಿಸಿದರು.
ನಗರದ ಕದ್ರಿ ಪಾರ್ಕ್ ರಸ್ತೆಯಲ್ಲಿ ಜನವರಿಯಿಂದ ವಾಹನಗಳಿಗೆ ಟೋಲ್ ವಿಧಿಸಲು ಚಿಂತನೆ ನಡೆಸಿರುವುದಕ್ಕೆ ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿಪಡಿಸಿದ ರಸ್ತೆಗೆ ಟೋಲ್ ವಿಧಿಸುವುದು ಜನಸಾಮಾನ್ಯರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆಯಾಗಲಿದ್ದು, ಇದು ಜಾರಿಯಾದರೆ ಜನರು ರೊಚ್ಚಿಗೇಳುವುದು ಖಚಿತ ಎಂದು ಎಚ್ಚರಿಸಿದರು.
ಪಾಲಿಕೆಯಲ್ಲಿ ಬಿಜೆಪಿ ಆಡಳಿತವಿದ್ದಾಗ ಕದ್ರಿ ಪಾರ್ಕ್ ಬಳಿಯ ಗೂಡಂಗಡಿಗಳಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ, ಕಾಂಗ್ರೆಸ್ ನೇತೃತ್ವದ ಪಾಲಿಕೆಯು ಪರ್ಯಾಯ ವ್ಯವಸ್ಥೆ ಕೂಡಾ ಮಾಡದೇ ಏಕಾಏಕಿ ಗೂಡಂಗಡಿಗಳನ್ನು ತೆರವುಗೊಳಿಸಿದ್ದು ದುಡಿಯುವ ವರ್ಗದ ಮೇಲಿನ ಪ್ರಹಾರವಾಗಿದ್ದು ಖಂಡನೀಯ ಎಂದು ಶಾಸಕರು ಹೇಳಿದರು.
ನಗರದ ಜೈಲ್ ಜಾಮರ್ ಸಮಸ್ಯೆ ಪರಿಹಾರಕ್ಕಾಗಿ ಸಾರ್ವಜನಿಕ ಪ್ರತಿಭಟನೆ, ಸಚಿವರ ಗಮನ ಸೆಳೆದು, ಅಧಿವೇಶನದಲ್ಲಿ ಪ್ರಸ್ತಾಪಿಸಿದರೂ ಸರ್ಕಾರದ ಕಡೆಯಿಂದ ಪರಿಹಾರ ಸಿಕ್ಕಿಲ್ಲ. ಇದೀಗ ರಾಜ್ಯ ಹೈಕೋರ್ಟ್ ಸ್ವತಃ ಮಧ್ಯ ಪ್ರವೇಶಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಆದೇಶ ನೀಡಿದೆ. ಇನ್ನಾದರೂ ಈ ದಪ್ಪ ಚರ್ಮದ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಟೀಕಿಸಿದರು.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇ-ಖಾತಾ ಪಡೆಯಲು ಜನಸಾಮಾನ್ಯರು ಅನುಭವಿಸುತ್ತಿರುವ ತೊಂದರೆ ಮುಂದುವರಿದಿದೆ. ಮೊದಲು ಅವೈಜ್ಞಾನಿಕ ಸಮೀಕ್ಷೆಯಿಂದ ಸಮಸ್ಯೆ ಇತ್ತು, ಈಗ ಅಧಿಕಾರಿಗಳು ಬಂದಿದ್ದರೂ ಸರ್ವರ್ ಇಲ್ಲ. ಕಳೆದ ಎರಡು ವರ್ಷಗಳಿಂದಿರುವ ಈ ಸಮಸ್ಯೆ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ನಾಗರಿಕರಿಗೆ ತೊಂದರೆ ತಪ್ಪಿಲ್ಲ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು.
ಮನಪಾ ವ್ಯಾಪ್ತಿಯ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಹೊಂಡಗಳಿಂದಾಗಿ ಅಪಘಾತಗಳು ಸಂಭವಿಸುತ್ತಿವೆ. ಆಳುವ ಸರ್ಕಾರ ದುರಸ್ತಿಗೆ ಅನುದಾನ ನೀಡದೇ ನಿರ್ಲಕ್ಷ್ಯ ವಹಿಸಿದೆ. ಅಲ್ಲದೆ, ನಗರದಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಗಾಂಧಿನಗರ, ಮರೋಳಿಯಂತಹ ಹಲವು ಕಡೆಗಳಿಂದ ದೂರುಗಳು ಬಂದರೂ ರಾಜ್ಯ ಸರ್ಕಾರದ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅಭಿವೃದ್ಧಿ ಕೆಲಸಗಳು ಪಾತಾಳಕ್ಕಿಳಿದಿದ್ದು, ಬೆಲೆ ಏರಿಕೆ ಮತ್ತು ಭ್ರಷ್ಟಾಚಾರಗಳು ಮಾತ್ರ ನಿರಂತರವಾಗಿ ನಡೆಯುತ್ತಿವೆ. ಮನಪಾಗೆ ರಾಜ್ಯ ಸರ್ಕಾರದಿಂದ ಬರಬೇಕಿದ್ದ ಅನುದಾನಗಳು, ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಂತಹ ಯಾವುದೇ ಅನುದಾನಗಳು ಬರುತ್ತಿಲ್ಲ. ಮಂತ್ರಿಗಳು ನೀಡುವ ಕೋಟಿ ಕೋಟಿ ಅನುದಾನಗಳ ಘೋಷಣೆಗಳು ಕೇವಲ ಸುಳ್ಳು ಭರವಸೆಗಳಿಗೆ ಸೀಮಿತವಾಗಿದ್ದು, ನಮ್ಮ ಜಿಲ್ಲೆಗೆ ಅಗತ್ಯವಿಲ್ಲ. ಕಾಂಗ್ರೆಸ್ ಸರ್ಕಾರ ಮಂಗಳೂರನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿರುವುದು ಅಕ್ಷಮ್ಯ ಎಂದು ಕಾಮತ್ ತೀವ್ರವಾಗಿ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಂಡಲದ ಅಧ್ಯಕ್ಷರಾದ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ, ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ರಾಜ್ಯ ಸುದ್ದಿಗಳು, ಸುದ್ದಿಗಳು









