ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೆ ತರಲು ಮುಂದಾಗಿರುವ ದ್ವೇಷ ಭಾಷಣ ವಿರೋಧಿ ಮಸೂದೆಯು ವಿರೋಧ ಪಕ್ಷಗಳ ಮತ್ತು ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕುವ ಒಂದು ವ್ಯವಸ್ಥಿತ ಪಿತೂರಿಯಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ ಅವರು ತೀವ್ರವಾಗಿ ಕಿಡಿಕಾರಿದ್ದಾರೆ. ಮಂಗಳೂರು ಉತ್ತರ ಕ್ಷೇತ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸರ್ಕಾರದ ಈ ನಡೆ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
ಸದನದಲ್ಲಿ ಯಾವುದೇ ಸುದೀರ್ಘ ಚರ್ಚೆ ಅಥವಾ ವಿರೋಧ ಪಕ್ಷಗಳ ಅಭಿಪ್ರಾಯಕ್ಕೆ ಮನ್ನಣೆ ನೀಡದೆ, ಏಕಾಏಕಿ ಈ ಮಸೂದೆಯನ್ನು ಅನುಮೋದಿಸಿರುವುದು ಸರ್ಕಾರದ ಸರ್ವಾಧಿಕಾರಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಈ ಕಾಯ್ದೆಯು ಕೇವಲ ದ್ವೇಷ ಭಾಷಣ ತಡೆಯುವುದಕ್ಕೆ ಸೀಮಿತವಾಗಿಲ್ಲ; ಬದಲಾಗಿ ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸುವ ಪತ್ರಕರ್ತರು ಮತ್ತು ಸಾಮಾಜಿಕ ಜಾಲತಾಣದ ಬಳಕೆದಾರರನ್ನು ಗುರಿಯಾಗಿಸಲು ರೂಪಿಸಲಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ನೇರ ದಾಳಿ ಎಂದು ಅವರು ವಾಗ್ದಾಳಿ ನಡೆಸಿದರು.
ಈ ಮಸೂದೆಯ ಕರಾಳ ಮುಖದ ಬಗ್ಗೆ ವಿವರಿಸಿದ ಶಾಸಕರು, ಪೊಲೀಸರಿಗೆ ಮಿತಿಮೀರಿದ ಅಧಿಕಾರವನ್ನು ನೀಡಲಾಗಿದೆ ಎಂದು ದೂರಿದರು. ದೇಶಭಕ್ತಿಯ ಘೋಷಣೆ ಕೂಗುವವರನ್ನು, ಹಿಂದೂ ಧರ್ಮದ ದೇವತೆಗಳ ಹೆಸರನ್ನು ಸ್ಮರಿಸುವವರನ್ನು ಅಥವಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪ್ರಚೋದನಕಾರಿ ಅಲ್ಲದಿದ್ದರೂ ಪ್ರಬಲವಾಗಿ ವಿಚಾರ ಮಂಡಿಸುವ ದಿಕ್ಸೂಚಿ ಭಾಷಣಗಾರರನ್ನು ಗುರಿಯಾಗಿಸಿ ಕೇಸು ದಾಖಲಿಸಲು ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಯಾವುದೇ ಮುನ್ಸೂಚನೆ ಇಲ್ಲದೆ ನೇರವಾಗಿ ಜೈಲಿಗೆ ಕಳುಹಿಸುವಂತಹ ಪ್ರಾವಿಧಾನಗಳು ಈ ಕಾನೂನಿನಲ್ಲಿದ್ದು, ಇದು ಒಂದು ನಿರ್ದಿಷ್ಟ ವರ್ಗವನ್ನು ಸಂತುಷ್ಟಗೊಳಿಸುವ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದರು.
ಬಿಜೆಪಿ ಪಕ್ಷವು ಈ ಕಪ್ಪು ಕಾನೂನನ್ನು ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಒಂದು ವೇಳೆ ಈ ಕಾಯ್ದೆಯನ್ನು ಬಳಸಿಕೊಂಡು ಭಾರತೀಯ ಜನತಾ ಪಕ್ಷದ ಕಾರ್ಯಕರ್ತರನ್ನು ಅಥವಾ ಧರ್ಮ ರಕ್ಷಣೆ ಮಾಡುವವರನ್ನು ವಿನಾಕಾರಣ ಬಂಧಿಸಲು ಮುಂದಾದರೆ, ಪಕ್ಷವು ಅವರ ಬೆನ್ನಿಗೆ ಗಟ್ಟಿಯಾಗಿ ನಿಲ್ಲಲಿದೆ. ಕಾನೂನಾತ್ಮಕವಾಗಿ ಮತ್ತು ಬೀದಿಗಿಳಿದು ಹೋರಾಟ ಮಾಡುವ ಮೂಲಕ ಸರ್ಕಾರದ ಈ ದಮನಕಾರಿ ನೀತಿಯನ್ನು ಸೋಲಿಸುತ್ತೇವೆ ಎಂದು ಡಾ. ಭರತ್ ಶೆಟ್ಟಿ ಎಚ್ಚರಿಕೆ ನೀಡಿದರು.
ಈ ಪ್ರತಿಭಟನೆಯಲ್ಲಿ ಮಂಡಲ ಅಧ್ಯಕ್ಷರಾದ ಕೊಟ್ಟಾರಿ, ಮಂಗಳೂರು ಮಹಾನಗರ ಪಾಲಿಕೆಯ ನಿಕಟಪೂರ್ವ ಸದಸ್ಯರು ಹಾಗೂ ಬಿಜೆಪಿ ಮಂಡಲದ ಪ್ರಮುಖ ಪದಾಧಿಕಾರಿಗಳು ಮತ್ತು ನೂರಾರು ಕಾರ್ಯಕರ್ತರು ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









