ಮಂಗಳೂರು : ನಗರ ಪೊಲೀಸ್ ಮತ್ತು ಮೇಕ್ ಎ ಚೇಂಜ್ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಟಿಎಂಎ ಪೈ ಇಂಟರ್ನ್ಯಾಷನಲ್ ಕನ್ವೆನ್ಸನ್ ಸೆಂಟರ್ನಲ್ಲಿ ‘ನಶೆ ಮುಕ್ತ ಮಂಗಳೂರು’ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಈ ಅಭಿಯಾನದಲ್ಲಿ ಸಮಾಜದ ವಿವಿಧ ಧರ್ಮಗುರುಗಳು ಪಾಲ್ಗೊಂಡು, ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪೊಲೀಸರೊಂದಿಗೆ ಕೈಜೋಡಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದರು. ರಾಮಕೃಷ್ಣ ಮಠದ ಸ್ವಾಮೀಜಿ ಯುಗೇಶಾನಂದ ಸ್ವಾಮೀಜಿ, ಬಿಷಪ್ ರೆ.ಡಾ. ಪೀಟರ್ ಪಾಮ್ಸ್ ಸಲ್ದಾನ ಹಾಗೂ ಅನೀಸ್ ಕೌಸರಿ ಅವರು ಮಾದಕ ದ್ರವ್ಯ ವಿರೋಧಿ ಜಾಗೃತಿಯ ಮಹತ್ವವನ್ನು ಸಾರಿದರು.
ಪೊಲೀಸ್ ಕಮಿಷನರ್ ಕಳವಳ ಮತ್ತು ವಿದ್ಯಾರ್ಥಿಗಳ ಪಾತ್ರ
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಮಾತನಾಡಿ, ಮಂಗಳೂರಿನಿಂದ ಓದಿ ಹೋದ ಹಲವರು ಐಪಿಎಸ್ ಅಧಿಕಾರಿಗಳು ಮತ್ತು ಐಟಿ ದಿಗ್ಗಜರಾಗಿರುವುದು ಹೆಮ್ಮೆಯ ವಿಷಯ. ಆದರೆ, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ, ಇಂಜಿನಿಯರಿಂಗ್ ಸೇರಿದಂತೆ ಹಲವು ವಿದ್ಯಾರ್ಥಿಗಳು ಡ್ರಗ್ಸ್ ಪ್ರಕರಣಗಳಲ್ಲಿ ಸಿಕ್ಕಿಬೀಳುತ್ತಿರುವುದು ವಿಷಾದನೀಯ ಎಂದರು. ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ತಮ್ಮ ಆಸುಪಾಸಿನಲ್ಲಿ ಡ್ರಗ್ಸ್ ಮಾರಾಟ ಅಥವಾ ಸೇವನೆ ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಲು ಕರೆ ನೀಡಿದರು.
ಕ್ಯೂಆರ್ ಕೋಡ್ ಮತ್ತು ತಪಾಸಣೆ ಕ್ರಮಗಳು
ಮಾಹಿತಿ ನೀಡುವವರ ಗೌಪ್ಯತೆಯನ್ನು ಕಾಪಾಡಲು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕ್ಯೂಆರ್ ಕೋಡ್ (QR Code) ಅಳವಡಿಸಲಾಗಿದೆ. ಈ ಮೂಲಕ ಬಂದ ಮಾಹಿತಿಯ ಆಧಾರದ ಮೇಲೆ ಕಳೆದ ಒಂದು ವಾರದಲ್ಲಿ 25 ಡ್ರಗ್ ಪೆಡ್ಲರ್ಗಳನ್ನು ಬಂಧಿಸಲಾಗಿದೆ. ಅಲ್ಲದೆ, ಕಳೆದ ಆರು ತಿಂಗಳಲ್ಲಿ 10,000 ವಿದ್ಯಾರ್ಥಿಗಳನ್ನು ಡ್ರಗ್ ಟೆಸ್ಟ್ಗೆ ಒಳಪಡಿಸಲಾಗಿದ್ದು, 50 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಪ್ರತಿ ಕಾಲೇಜು ಪ್ರವೇಶಾತಿ ವೇಳೆ ಮತ್ತು ಪ್ರತಿ ಮೂರು ತಿಂಗಳಿಗೊಮ್ಮೆ ಡ್ರಗ್ ಟೆಸ್ಟ್ ಕಡ್ಡಾಯಗೊಳಿಸಬೇಕು ಹಾಗೂ ಪಾಸಿಟಿವ್ ಬಂದವರಿಗೆ ಪುನರ್ವಸತಿ ಕಲ್ಪಿಸಬೇಕು ಎಂದು ಕಮಿಷನರ್ ಸಲಹೆ ನೀಡಿದರು.
ಡ್ರಗ್ಸ್ ಜಾಲದ ಭಯಾನಕ ಮುಖ ಮತ್ತು ಜೈಲು ಶಿಕ್ಷೆ
ಇತ್ತೀಚಿನ ತನಿಖೆಗಳ ಪ್ರಕಾರ, ಮಂಗಳೂರು ಜೈಲಿನಲ್ಲಿರುವ ವಿಚಾರಣಾಧೀನ ಕೈದಿಗಳಲ್ಲಿ ಶೇ. 80ರಷ್ಟು ಮಂದಿ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿದವರಾಗಿದ್ದಾರೆ. ಐಐಟಿ ವಿದ್ಯಾರ್ಥಿಗಳೂ ಕೂಡ ಈ ಜಾಲದಲ್ಲಿ ಸಿಲುಕಿ ಜೈಲು ಪಾಲಾಗುತ್ತಿರುವುದು ಆತಂಕಕಾರಿ. ಡ್ರಗ್ಸ್ ಮಾರಾಟಗಾರರಿಗೆ ಕನಿಷ್ಠ 10 ವರ್ಷಗಳ ಶಿಕ್ಷೆಯಾಗಲಿದ್ದು, ಜಾಮೀನು ಪಡೆಯುವುದು ಈಗಿನ ಕಠಿಣ ಕಾನೂನಿನಡಿ ಅಸಾಧ್ಯವಾಗಿದೆ. ಮಾದಕ ದ್ರವ್ಯ ಸೇವನೆಯಿಂದ ಯೋಚನಾ ಶಕ್ತಿ ಕಳೆದುಕೊಂಡು ಯುವಜನತೆ ಅಪರಾಧ ಕೃತ್ಯಗಳಲ್ಲಿ ತೊಡಗುತ್ತಿದ್ದಾರೆ ಎಂದು ಕಮಿಷನರ್ ಎಚ್ಚರಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









