ಮಂಗಳೂರು : ಕರಾವಳಿ ಚಿತ್ರರಂಗದ ಅಭಿಮಾನಿಗಳಿಗೆ ಭರ್ಜರಿ ಸುದ್ದಿಯೊಂದು ಹೊರಬಿದ್ದಿದ್ದು, ‘ಆಕ್ಷನ್ ಕಿಂಗ್’ ಅರ್ಜುನ್ ದೇವ್ (ಅರ್ಜುನ್ ಕಾಪಿಕಾಡ್) ಅವರ ಮಹತ್ವಾಕಾಂಕ್ಷೆಯ ನಿರ್ದೇಶನದ ‘ಟಾಸ್’ (Toss) ಚಿತ್ರದ ಪ್ರಮುಖ ಅಪ್ಡೇಟ್ ಅನಾವರಣಗೊಂಡಿದೆ. ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದ ಬ್ಲಾಕ್ ಬಸ್ಟರ್ ಸಿನಿಮಾ ‘ಕೆಜಿಎಫ್’ ಖ್ಯಾತಿಯ ಪ್ರಮುಖ ನಟರೊಬ್ಬರು ಇದೇ ಮೊದಲ ಬಾರಿಗೆ ತುಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ಚಿತ್ರತಂಡವು ಅವರ ವಿಶೇಷ ಎಐ (AI) ಮೋಷನ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಸಿನಿಮಾ ಬಿಡುಗಡೆಯ ಅಧಿಕೃತ ದಿನಾಂಕವನ್ನು ಪ್ರಕಟಿಸಿದೆ.
ಸುಮಾರು ಒಂದು ವರ್ಷದ ಹಿಂದೆ ಈ ವಿಭಿನ್ನ ಕಥಾಹಂದರದ ಚಿತ್ರವನ್ನು ಘೋಷಿಸಿದ್ದ ಅರ್ಜುನ್ ಕಾಪಿಕಾಡ್ ಅವರು ಇದೀಗ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಸಂಪೂರ್ಣವಾಗಿ ಮುಗಿಸಿದ್ದು, ಸಿನಿಮಾ ಬೆಳ್ಳಿಪರದೆಗೆ ಬರಲು ಸಜ್ಜಾಗಿದೆ. ಚಿತ್ರದ ಪ್ರಚಾರದ ಮೊದಲ ಹಂತವಾಗಿ ಬಿಡುಗಡೆ ಮಾಡಲಾದ ಎಐ ವಿಡಿಯೋದಲ್ಲಿ ‘ಕೆಜಿಎಫ್’ ಚಿತ್ರದ ‘ಗರುಡ’ ಪಾತ್ರದ ಮೂಲಕ ದೇಶಾದ್ಯಂತ ಖ್ಯಾತಿ ಗಳಿಸಿದ್ದ ನಟ ರಾಮ್ (ಗರುಡ ರಾಮ್) ಅವರ ಖಡಕ್ ಲುಕ್ ರಿವೀಲ್ ಮಾಡಲಾಗಿದೆ. ಈ ಚಿತ್ರದಲ್ಲಿ ಅವರು ಪ್ರಮುಖ ಖಳನಾಯಕನಾಗಿ ಅಬ್ಬರಿಸಲಿದ್ದು, ನಾಯಕ ನಟ ಅರ್ಜುನ್ ದೇವ್ ಅವರಿಗೆ ಪ್ರಬಲ ಟಕ್ಕರ್ ನೀಡಲಿದ್ದಾರೆ.
ಗರುಡ ರಾಮ್ ಅವರ ನಟನೆಯ ಕುರಿತು ಮಾತನಾಡಿರುವ ನಟ-ನಿರ್ದೇಶಕ ಅರ್ಜುನ್ ಕಾಪಿಕಾಡ್, ತುಳು ಭಾಷೆ ಮತ್ತು ಕರಾವಳಿ ಚಿತ್ರರಂಗ ಜಾಗತಿಕ ಮಟ್ಟದಲ್ಲಿ ಬೆಳೆಯಬೇಕಾದರೆ ಇಂತಹ ದೊಡ್ಡ ಬಜೆಟ್ ಹಾಗೂ ತಾರಾಗಣದ ಸಿನಿಮಾಗಳು ಬರುವುದು ಅತ್ಯಗತ್ಯ ಎಂದಿದ್ದಾರೆ. ಗರುಡ ರಾಮ್ ಅವರ ಎಂಟ್ರಿ ಚಿತ್ರದ ಮೌಲ್ಯವನ್ನು ಹೆಚ್ಚಿಸಿದೆ. ಅವರಂತಹ ಅನುಭವಿ ನಟನೊಂದಿಗೆ ಕೆಲಸ ಮಾಡಿದ್ದು ಅದ್ಭುತ ಅನುಭವವಾಗಿದ್ದು, ಅವರು ಮೂರು ವಾರಗಳ ಕಾಲ ಶೂಟಿಂಗ್ನಲ್ಲಿ ಭಾಗವಹಿಸಿದ್ದಲ್ಲದೆ ಸ್ವತಃ ಮಂಗಳೂರಿಗೆ ಬಂದು ಡಬ್ಬಿಂಗ್ ಮಾಡಿಕೊಟ್ಟಿರುವುದು ಅವರ ವೃತ್ತಿಪರತೆಗೆ ಸಾಕ್ಷಿ ಎಂದು ಹೊಗಳಿದ್ದಾರೆ. ಸಾರ್ವತ್ರಿಕ ಕುತೂಹಲ ಮೂಡಿಸಿರುವ ‘ಟಾಸ್’ ಸಿನಿಮಾ ಸೆಪ್ಟೆಂಬರ್ 18ರಂದು ಅದ್ಧೂರಿಯಾಗಿ ತೆರೆಕಾಣಲಿದ್ದು, ಕೇವಲ ತುಳು ಮಾತ್ರವಲ್ಲದೆ ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಏಕಕಾಲಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿರುವುದು ಕರಾವಳಿ ಸಿನಿರಂಗದ ಹೆಮ್ಮೆಯ ವಿಷಯವಾಗಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಮನರಂಜನೆ










