ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ನೇತೃತ್ವದಲ್ಲಿ ವಿಮಾನ ಅಪಘಾತ ಸಂಭವಿಸಿದಾಗ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಮತ್ತು ತುರ್ತು ರಕ್ಷಣಾ ಕಾರ್ಯಾಚರಣೆಯ ಬೃಹತ್ ಅಣಕು ಪ್ರದರ್ಶನವು ಶುಕ್ರವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ನಡೆಯಿತು.
ಮಂಗಳೂರಿನಿಂದ ಮುಂಬೈಗೆ ಪ್ರಯಾಣ ಬೆಳೆಸಿದ್ದ ‘ಏರ್ಲೈನ್ XYZ’ ಸಂಸ್ಥೆಯ ‘XYZ 123’ ವಿಮಾನವು ಬೆಳಗ್ಗೆ 10:20ರ ಸುಮಾರಿಗೆ ವಿಮಾನ ನಿಲ್ದಾಣದ ಆವರಣದ ಹೊರಭಾಗದಲ್ಲಿ ಪತನಗೊಂಡಿರುವಂತೆ ಕೃತಕ ಸನ್ನಿವೇಶವನ್ನು ಸೃಷ್ಟಿಸಿ ಈ ಅಣಕು ಕಾರ್ಯಾಚರಣೆ ನಡೆಸಲಾಯಿತು.
ದುರಂತಕ್ಕೀಡಾದ ವಿಮಾನದಲ್ಲಿ 117 ಪ್ರಯಾಣಿಕರು ಹಾಗೂ 6 ಸಿಬ್ಬಂದಿ ಇದ್ದರು ಎಂದು ಅಂದಾಜಿಸಲಾಗಿತ್ತು. ಅಪಘಾತದ ಮಾಹಿತಿ ಸಿಗುತ್ತಿದ್ದಂತೆಯೇ ವಿಮಾನ ನಿಲ್ದಾಣದ ರಕ್ಷಣಾ ಪಡೆ, ವೈದ್ಯಕೀಯ ತಂಡಗಳು, ಅಗ್ನಿಶಾಮಕ ದಳ ಮತ್ತು ಪೊಲೀಸ್ ಸಿಬ್ಬಂದಿ ಕ್ಷಣಾರ್ಧದಲ್ಲಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯವನ್ನು ಆರಂಭಿಸಿದರು.
ಬೆಳಗ್ಗೆ 10:20ಕ್ಕೆ ಅಪಘಾತ ಸಂಭವಿಸಿದ್ದು, 10:37ರ ವೇಳೆಗೆ ಆಂಬ್ಯುಲೆನ್ಸ್ಗಳು ಮತ್ತು ರಕ್ಷಣಾ ತಂಡಗಳು ಘಟನಾ ಸ್ಥಳವನ್ನು ತಲುಪಿದವು. 10:44ಕ್ಕೆ ತುರ್ತು ಪರಿಹಾರ ಶಿಬಿರವನ್ನು ತೆರೆಯಲಾಯಿತು. ತೀವ್ರ ಶೋಧ ನಡೆಸಿದ ತಂಡಗಳು 10:56ಕ್ಕೆ ವಿಮಾನದ ‘ಬ್ಲಾಕ್ ಬಾಕ್ಸ್’ ಅನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದವು. ಇದೇ ವೇಳೆ ಪ್ರಯಾಣಿಕರ ಕುಟುಂಬಸ್ಥರಿಗೆ ನಿಖರ ಮಾಹಿತಿ ಒದಗಿಸಲು 0824-12345678 ಸಂಖ್ಯೆಯ ಪ್ರತ್ಯೇಕ ಸಹಾಯವಾಣಿ ಕೇಂದ್ರವನ್ನು ಆರಂಭಿಸಲಾಯಿತು.
ಈ ಅಣಕು ದುರಂತದಲ್ಲಿ ವಿಮಾನ ಅಪಘಾತದಿಂದ 7 ಮಂದಿ ಹಾಗೂ ಭಯಭೀತರಾಗಿ ಪಕ್ಕದ ಗುರುಪುರ ನದಿಗೆ ಹಾರಿದ ಇಬ್ಬರು ಸೇರಿದಂತೆ ಒಟ್ಟು 9 ಮಂದಿ ಮೃತಪಟ್ಟಿರುವಂತೆ ಬಿಂಬಿಸಲಾಯಿತು. ಉಳಿದವರನ್ನು ಗಾಯದ ತೀವ್ರತೆಗೆ ಅನುಗುಣವಾಗಿ ಗಂಭೀರ ಗಾಯಗೊಂಡವರು (P1), ಸಾಧಾರಣ ಗಾಯಗೊಂಡವರು (P2), ಸಣ್ಣಪುಟ್ಟ ಗಾಯಗೊಂಡವರು (P3) ಹಾಗೂ ಮೃತರು (PO) ಎಂಬ ಟ್ಯಾಗ್ಗಳ ಮೂಲಕ ವರ್ಗೀಕರಿಸಲಾಯಿತು. ತೀವ್ರವಾಗಿ ಗಾಯಗೊಂಡ 39 ಪ್ರಯಾಣಿಕರು ಮತ್ತು ಮೂವರು ಸಿಬ್ಬಂದಿ ಸೇರಿದಂತೆ 42 ಮಂದಿಯನ್ನು 12 ಆಂಬ್ಯುಲೆನ್ಸ್ಗಳ ಮೂಲಕ ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ರವಾನಿಸಲಾಯಿತು. ತುರ್ತು ವೈದ್ಯಕೀಯ ಆರೈಕೆ ಅಗತ್ಯವಿದ್ದ 21 ಮಂದಿ ಹಾಗೂ ಸಣ್ಣಪುಟ್ಟ ಗಾಯಗಳಾದ 45 ಮಂದಿಗೆ ತುರ್ತು ನೆರವು ಕೇಂದ್ರಗಳಲ್ಲಿ ಚಿಕಿತ್ಸೆ ವ್ಯವಸ್ಥೆ ಮಾಡಲಾಯಿತು. ಮೃತದೇಹಗಳಿಗಾಗಿ ಶ್ರೀದೇವಿ ಕಾಲೇಜಿನಲ್ಲಿ ತಾತ್ಕಾಲಿಕ ಶವಾಗಾರವನ್ನು ಸಜ್ಜುಗೊಳಿಸಲಾಗಿತ್ತು.
ಅಪಘಾತದ ಆತಂಕದಿಂದ ಗುರುಪುರ ನದಿಗೆ ಹಾರಿದ ಇಬ್ಬರಿಗಾಗಿ ಎನ್ಡಿಆರ್ಎಫ್ ಸಿಬ್ಬಂದಿ ಎರಡು ದೋಣಿಗಳ ಸಹಾಯದಿಂದ ನದಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದರು. ಮುನ್ನೆಚ್ಚರಿಕಾ ಕ್ರಮವಾಗಿ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದರು. ವಿಮಾನದಿಂದ ಸೋರಿಕೆಯಾಗುತ್ತಿದ್ದ ಇಂಧನದಿಂದ ಪರಿಸರ ಮಾಲಿನ್ಯವಾಗುವುದನ್ನು ತಡೆಯಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಮಾದರಿಗಳನ್ನು ಸಂಗ್ರಹಿಸಿತು. ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸುತ್ತಮುತ್ತಲಿನ ಜಾನುವಾರುಗಳ ಮೇಲಾಗಬಹುದಾದ ದುಷ್ಪರಿಣಾಮಗಳ ಪರಿಶೀಲನೆಯಲ್ಲಿ ತೊಡಗಿಸಿಕೊಂಡರು.
2010ರಲ್ಲಿ ಮಂಗಳೂರಿನಲ್ಲಿ ನಡೆದ ಭೀಕರ ವಿಮಾನ ದುರಂತದ ಹಿನ್ನೆಲೆಯಲ್ಲಿ, ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗದರ್ಶನದಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ವಿಮಾನ ನಿಲ್ದಾಣ ಪ್ರಾಧಿಕಾರದ ಸಹಯೋಗದಲ್ಲಿ ಈ ಕಾರ್ಯಾಚರಣೆ ಜರುಗಿತು. ಇದರಲ್ಲಿ 120 ಪೊಲೀಸರು, 80 ವಿಮಾನ ನಿಲ್ದಾಣ ಸಿಬ್ಬಂದಿ, 60 ಅಗ್ನಿಶಾಮಕ ದಳದ ಸಿಬ್ಬಂದಿ, 30 ಎನ್ಡಿಆರ್ಎಫ್ ಮತ್ತು 25 ಎಸ್ಡಿಆರ್ಎಫ್ ಸಿಬ್ಬಂದಿ, ವೈದ್ಯಕೀಯ ತಂಡಗಳು, ಸ್ವಯಂಸೇವಕರು ಹಾಗೂ ಎಂಆರ್ಪಿಎಲ್, ಎಚ್ಪಿಸಿಎಲ್, ಎನ್ಎಂಪಿಎ ಮತ್ತು ಎಂಎಸ್ಇಝಡ್ನ ಅಗ್ನಿಶಾಮಕ ದಳಗಳು ಸಕ್ರಿಯವಾಗಿ ಪಾಲ್ಗೊಂಡಿದ್ದವು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು









