ಸುರತ್ಕಲ್: ಅಕ್ರಮ ಗೋ ಸಾಗಾಟ ಪ್ರಕರಣಗಳಲ್ಲಿ ಜಾನುವಾರುಗಳನ್ನು ರಕ್ಷಿಸುವ ಪೊಲೀಸರಿಗೆ, ನ್ಯಾಯಾಲಯದ ಪ್ರಕ್ರಿಯೆ ಮುಗಿದು ಅವುಗಳನ್ನು ಗೋಶಾಲೆಗಳಿಗೆ ಹಸ್ತಾಂತರಿಸುವವರೆಗೂ ಠಾಣೆಯ ಆವರಣದಲ್ಲೇ ಪೋಷಣೆ ಮಾಡುವುದು ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗೋಶಾಲೆಗಳಲ್ಲಿನ ಸ್ಥಳಾವಕಾಶದ ಕೊರತೆ ಹಾಗೂ ಕಾನೂನು ಪ್ರಕ್ರಿಯೆಗಳ ವಿಳಂಬದಿಂದಾಗಿ ಜಾನುವಾರುಗಳ ನಿರ್ವಹಣೆಯ ಹೊರೆ ಪೊಲೀಸ್ ಇಲಾಖೆಯ ಮೇಲೆ ಬಿದ್ದಿದೆ.
ಕಳೆದ ನವೆಂಬರ್ 23ರಂದು ಸುರತ್ಕಲ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಸಾಗಾಟ ತಡೆದು ರಕ್ಷಿಸಲಾದ 22 ಗೋವುಗಳು ನ್ಯಾಯಾಲಯದ ಆದೇಶ ಬಾಕಿ ಇರುವ ಕಾರಣ ಇಂದಿಗೂ ಠಾಣೆಯ ಬಳಿಯೇ ಆಶ್ರಯ ಪಡೆದಿವೆ. ಇದಕ್ಕೂ ಮುನ್ನ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ರಕ್ಷಿಸಲಾದ 16 ಗೋವುಗಳನ್ನು ಪೊಲೀಸರು ವಾರಗಟ್ಟಲೆ ಪೋಷಿಸಿದ್ದರು. ಠಾಣೆಗಳಲ್ಲಿ ಜಾನುವಾರುಗಳನ್ನು ಕಟ್ಟಲು ಸೂಕ್ತ ವ್ಯವಸ್ಥೆ ಹಾಗೂ ಪ್ರತ್ಯೇಕ ಸಿಬ್ಬಂದಿ ಇಲ್ಲದಿದ್ದರೂ, ಪ್ರಕರಣ ಇತ್ಯರ್ಥವಾಗುವವರೆಗೆ ಅವುಗಳ ಮೇವು, ಕುಡಿಯುವ ನೀರು, ಆರೈಕೆ ಮತ್ತು ವೈದ್ಯಕೀಯ ವೆಚ್ಚವನ್ನು ಸಿಬ್ಬಂದಿಯೇ ಭರಿಸುತ್ತಿದ್ದಾರೆ.
ವಶಪಡಿಸಿಕೊಂಡ ಜಾನುವಾರುಗಳು ತಪ್ಪಿಸಿಕೊಂಡರೆ ಪ್ರಕರಣದ ತನಿಖೆಗೆ ಹಿನ್ನಡೆಯಾಗುವ ಭೀತಿಯೂ ಪೊಲೀಸರನ್ನು ಕಾಡುತ್ತಿದೆ. ನಿಯಮಾವಳಿಗಳ ಪ್ರಕಾರ, ಅಕ್ರಮ ಸಾಗಾಟ ಪತ್ತೆಯಾದಾಗ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಕಾಯ್ದೆ, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಹಾಗೂ ಮೋಟಾರು ವಾಹನ ಕಾಯ್ದೆಯಡಿ ಎಫ್ಐಆರ್ ದಾಖಲಿಸಿ, ಸ್ಥಳದಲ್ಲೇ ಇಬ್ಬರು ಸಾಕ್ಷಿಗಳ ಸಮ್ಮುಖದಲ್ಲಿ ಸೀಜರ್ ಮಹಜರ್ ನಡೆಸಲಾಗುತ್ತದೆ. ಬಳಿಕ ಪಶುವೈದ್ಯರಿಂದ ಆರೋಗ್ಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುತ್ತದೆ.
ನ್ಯಾಯಾಲಯದ ಸುಪರ್ದಿಯಲ್ಲಿರುವ ಈ ಜಾನುವಾರುಗಳನ್ನು ಕೋರ್ಟ್ ಆದೇಶದ ಮೇರೆಗೆ ಸಮೀಪದ ಗೋಶಾಲೆಗೆ ಹಸ್ತಾಂತರಿಸುವುದು ವಾಡಿಕೆ. ಆದರೆ, ಗೋಶಾಲೆಗಳಲ್ಲಿ ಸ್ಥಳಾವಕಾಶವಿಲ್ಲದ ಕಾರಣ ಠಾಣೆಯಲ್ಲೇ ಇರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ವಿಚಾರಣೆ ಪೂರ್ಣಗೊಂಡ ಬಳಿಕ ನ್ಯಾಯಾಲಯದ ತೀರ್ಪಿನಂತೆ ಜಾನುವಾರುಗಳನ್ನು ಗೋಶಾಲೆಗೆ ಶಾಶ್ವತವಾಗಿ ಒಪ್ಪಿಸುವುದು ಅಥವಾ ಮಾಲೀಕರಿಗೆ ಮರಳಿಸುವ ಪ್ರಕ್ರಿಯೆ ನಡೆಯಲಿದ್ದು, ಅಪರಾಧ ಸಾಬೀತಾದರೆ ವಾಹನ ಮತ್ತು ಜಾನುವಾರುಗಳನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳುತ್ತದೆ.
ಪ್ರಸ್ತುತ ಎದುರಾಗಿರುವ ಈ ಸಮಸ್ಯೆಯನ್ನು ಬಗೆಹರಿಸಲು ವಶಪಡಿಸಿಕೊಂಡ ಗೋವುಗಳನ್ನು ವಿಳಂಬವಿಲ್ಲದೆ ತ್ವರಿತವಾಗಿ ಗೋ ಕೇಂದ್ರಗಳಿಗೆ ಹಸ್ತಾಂತರಿಸಲು ಅವಕಾಶ ಕಲ್ಪಿಸಬೇಕು ಎಂದು ಪೊಲೀಸ್ ಸಿಬ್ಬಂದಿ ಒತ್ತಾಯಿಸಿದ್ದಾರೆ. ಅಲ್ಲದೆ, ಅನಿವಾರ್ಯವಾಗಿ ಠಾಣೆಯಲ್ಲಿ ಇರಿಸಿಕೊಳ್ಳುವ ದಿನಗಳ ಮಟ್ಟಿಗೆ ಜಾನುವಾರುಗಳ ಮೇವು ಹಾಗೂ ನಿರ್ವಹಣಾ ವೆಚ್ಚಕ್ಕಾಗಿ ಸರಕಾರದಿಂದ ಪ್ರತ್ಯೇಕ ಅನುದಾನ ಬಿಡುಗಡೆ ಮಾಡಬೇಕು ಮತ್ತು ಕಾನೂನು ಜಾರಿಗೆ ಪೂರಕವಾದ ಮೂಲಸೌಕರ್ಯ ಒದಗಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









