ಉಪ್ಪಿನಂಗಡಿ: ದುಬಾರಿ ಶುಲ್ಕ ವಸೂಲಾತಿಯಿಂದ ತೀವ್ರ ವಿವಾದಕ್ಕೆ ಕಾರಣವಾಗಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ವಳಾಲು ಪಡ್ಡು ಬಳಿಯ ಟೋಲ್ ಪ್ಲಾಜಾಗೆ ಶುಕ್ರವಾರ ರೈತಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್ ಮತ್ತು ಕಾರ್ಮಿಕ ಮುಖಂಡ ಬಿ.ಎಂ. ಭಟ್ ನೇತೃತ್ವದಲ್ಲಿ ನೂರಾರು ಮಂದಿ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ನಡೆಸಿದರು.
ವಳಾಲು ಪಡ್ಡು ಟೋಲ್ ಕೇಂದ್ರದಲ್ಲಿ ಆರಂಭಿಸಿರುವ ಶುಲ್ಕ ಸಂಗ್ರಹವನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಜಿಲ್ಲಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರ ನಡುವೆ ಸಭೆ ನಡೆಸಿ ಒಮ್ಮತಕ್ಕೆ ಬಂದ ಬಳಿಕವಷ್ಟೇ ಟೋಲ್ ಸಂಗ್ರಹಿಸಬೇಕು. ಬಜತ್ತೂರು ಗ್ರಾಮವೂ ಸೇರಿದಂತೆ ನಿತ್ಯ ಸಂಚರಿಸುವ ಸ್ಥಳೀಯ ವಾಹನಗಳಿಗೆ ಸಂಪೂರ್ಣ ಟೋಲ್ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದ ಅವರು, ಈ ಕುರಿತು ಮಾತುಕತೆ ನಡೆಸಲು ಒಂದು ವಾರದ ಗಡುವು ನೀಡಿದರು. ಒಂದು ವೇಳೆ ಸ್ಪಂದಿಸದಿದ್ದರೆ 3 ಸಾವಿರಕ್ಕೂ ಅಧಿಕ ಜನರನ್ನು ಸೇರಿಸಿ ಟೋಲ್ ಕೇಂದ್ರವನ್ನು ಸಂಪೂರ್ಣ ಬಂದ್ ಮಾಡುವುದಾಗಿ ಎಚ್ಚರಿಸಿದರು.
ಸ್ಥಳದಲ್ಲಿದ್ದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕರ್ನಾಟಕ ರಾಜ್ಯ ರೈತಸಂಘ ಹಸಿರು ಸೇನೆಯ ಜಿಲ್ಲಾಧ್ಯಕ್ಷ ರೂಪೇಶ್ ರೈ ಅಲಿಮಾರ್, “ನಿಮ್ಮ ಈ ಟೋಲ್ ಕೇಂದ್ರವೇ ದೊಡ್ಡ ಸಮಸ್ಯೆಯಾಗಿದೆ; ನಾವು ಸಮಸ್ಯೆ ಸೃಷ್ಟಿಸುತ್ತಿಲ್ಲ, ಬದಲಾಗಿ ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಇಲ್ಲಿ ಕನಿಷ್ಠ ಸರ್ವೀಸ್ ರಸ್ತೆಯಾದರೂ ಇದೆಯೇ? ಮಸೀದಿ, ದೇವಸ್ಥಾನ, ಬ್ಯಾಂಕ್ಗಳಿಗೆ ಹೋಗುವವರು ನಿಮಗೆ ಹಣ ಪಾವತಿಸಿ ಹೋಗಬೇಕೇ? ಹಾಲಿನ ಡೈರಿಗೆ 10 ಲೀಟರ್ ಹಾಲು ಕೊಂಡೊಯ್ಯುವ ರೈತರು ನಿಮಗೆ 200 ರೂಪಾಯಿ ಟೋಲ್ ಕಟ್ಟಬೇಕೇ? ನೀವೇನು ಮಕ್ಕಳಾಟಿಕೆ ಆಡುತ್ತಿದ್ದೀರಾ? ಜನಸಾಮಾನ್ಯರ ಕಷ್ಟ ನಿಮಗೆ ಅರ್ಥವಾಗುವುದಿಲ್ಲವೇ?” ಎಂದು ಆಕ್ರೋಶದಿಂದ ಪ್ರಶ್ನಿಸಿದರು.
ಕಾರ್ಮಿಕ ಮುಖಂಡ ಬಿ.ಎಂ. ಭಟ್ ಮಾತನಾಡಿ, ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಈ ಟೋಲ್ ಆರಂಭಿಸಲಾಗಿದೆ. ನಿಗದಿತ ಕಿಲೋಮೀಟರ್ ಅಂತರದ ನಿಯಮವನ್ನು ಪಾಲಿಸದೆ ದುಬಾರಿ ಹಣ ಲೂಟಿ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಯಾವುದೇ ಪೂರ್ವ ಮಾಹಿತಿ ನೀಡದೆ ಏಕಾಏಕಿ ಶುಲ್ಕ ಸಂಗ್ರಹಿಸುತ್ತಿರುವುದು ಕೇಂದ್ರ ಸರಕಾರದ ಸರ್ವಾಧಿಕಾರಿ ಧೋರಣೆಗೆ ಸಾಕ್ಷಿಯಾಗಿದೆ. ಇತರೆಲ್ಲಾ ಟೋಲ್ಗಳಲ್ಲಿ ಸ್ಥಳೀಯರಿಗೆ ಉಚಿತ ಸಂಚಾರದ ವ್ಯವಸ್ಥೆ ಇದ್ದರೆ, ಇಲ್ಲಿ ಕಾರುಗಳ ಏಕಮುಖ ಸಂಚಾರಕ್ಕೆ 140 ರೂ. ಹಾಗೂ ಲಾರಿಗಳಿಗೆ 465 ರೂ. ವಸೂಲಿ ಮಾಡುವ ಮೂಲಕ ಜನರ ಹಣವನ್ನು ಕೊಳ್ಳೆಹೊಡೆಯಲಾಗುತ್ತಿದೆ ಎಂದು ಆರೋಪಿಸಿದರು.
ಸ್ಥಳೀಯರೊಂದಿಗೆ ಮಾತುಕತೆ ನಡೆಸದೆ ಹಾಗೂ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣಗೊಳ್ಳದೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹ ಮಾಡಬಾರದು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆಯಲಿದೆ ಎಂದು ಅವರು ಎಚ್ಚರಿಕೆ ನೀಡಿದರು.
ಅಪರಾಹ್ನ 2.30ರ ಒಳಗೆ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದರು. ಆದರೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸದ ಕಾರಣ ಆಕ್ರೋಶಗೊಂಡ ಪ್ರತಿಭಟನಾಕಾರರು, ಎಲ್ಲಾ ಟೋಲ್ ಬ್ಯಾರಿಕೇಡ್ಗಳನ್ನು ತೆರವುಗೊಳಿಸಿ ಸಾರ್ವಜನಿಕ ವಾಹನಗಳಿಗೆ ಮುಕ್ತ ಹಾಗೂ ಉಚಿತ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಅಲ್ಲದೆ ಟೋಲ್ ಕ್ಯಾಮೆರಾಗಳನ್ನು ಸ್ಥಗಿತಗೊಳಿಸಿ, ಸಂಜೆಯವರೆಗೂ ಯಾವುದೇ ಶುಲ್ಕ ವಸೂಲಿ ನಡೆಯದಂತೆ ತಡೆದರು.
ಈ ಪ್ರತಿಭಟನೆಯಲ್ಲಿ ನ್ಯಾಯವಾದಿ ಇಸ್ಮಾಯಿಲ್ ನೆಲ್ಯಾಡಿ, ಪ್ರಮುಖರಾದ ಪ್ರಶಾಂತ್ ಗೋಳಿತೊಟ್ಟು, ಝಬೈರ್, ಪ್ರವೀಣ್, ರಶೀದ್ ಮಠ, ಸರ್ಫರಾಝ್ ಸೇರಿದಂತೆ ನೂರಾರು ಸ್ಥಳೀಯರು ಪಾಲ್ಗೊಂಡಿದ್ದರು.
ಸ್ಥಳದಲ್ಲಿ ಉಪ್ಪಿನಂಗಡಿ ಠಾಣಾ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಆದರೆ ಪ್ರತಿಭಟನಾಕಾರರು ಟೋಲ್ ಗೇಟ್ಗಳ ತಡೆಗೋಡೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಪೊಲೀಸರು ಯಾವುದೇ ಹಸ್ತಕ್ಷೇಪ ಮಾಡದೆ ಮೌನವಾಗಿದ್ದು, ಇಡೀ ಘಟನಾವಳಿಯನ್ನು ವಿಡಿಯೋ ಚಿತ್ರೀಕರಣ ಮಾಡಿಕೊಂಡರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









