ಮಂಗಳೂರು : ನರಿಂಗಾನ ಗ್ರಾಮದ ಮೋರ್ಲ ಬೋಳದಲ್ಲಿ ‘ನರಿಂಗಾನ ಕಂಬಳ ಸಮಿತಿ’ ಆಶ್ರಯದಲ್ಲಿ ನಾಲ್ಕನೇ ವರ್ಷದ ಹೊನಲು ಬೆಳಕಿನ ‘ಲವಕುಶ ಜೋಡುಕರೆ ನರಿಂಗಾನ ಕಂಬಳೋತ್ಸವ-2026’ ಜನವರಿ 10ರಂದು ಶನಿವಾರ ಬೆಳಿಗ್ಗೆ 9 ಗಂಟೆಗೆ ಅದ್ದೂರಿಯಾಗಿ ಜರುಗಲಿದೆ ಎಂದು ವಿಧಾನಸಭಾಧ್ಯಕ್ಷ ಹಾಗೂ ಕಂಬಳ ಸಮಿತಿ ಅಧ್ಯಕ್ಷ ‘ಯು.ಟಿ. ಖಾದರ್’ ತಿಳಿಸಿದ್ದಾರೆ. ಮಂಗಳೂರಿನ ಸರ್ಕ್ಯೂಟ್ ಹೌಸ್ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಜಾನಪದ ಕ್ರೀಡಾಕೂಟಕ್ಕೆ ಸಕಲ ಸಿದ್ಧತೆಗಳು ನಡೆದಿವೆ ಎಂದರು.
ಒಡಿಯೂರು ಶ್ರೀಗಳಾದ ‘ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ’ ಕಂಬಳವನ್ನು ಉದ್ಘಾಟಿಸಲಿದ್ದು, ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ‘ಡಾ. ಎಂ. ಮೋಹನ್ ಆಳ್ವ’ ದೀಪ ಬೆಳಗಿಸಲಿದ್ದಾರೆ. ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ‘ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ’, ಜಿಲ್ಲಾಧಿಕಾರಿ ‘ದರ್ಶನ್ ಎಚ್.ವಿ.’, ಪೊಲೀಸ್ ಆಯುಕ್ತ ‘ಸುಧೀರ್ ಕುಮಾರ್ ರೆಡ್ಡಿ’ ಸೇರಿದಂತೆ ಹಲವು ಗಣ್ಯರು ಬೆಳಿಗ್ಗಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ‘ಡಿ.ಕೆ. ಶಿವಕುಮಾರ್’ ಚಾಲನೆ ನೀಡಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ರಾಜ್ಯ ಸಚಿವ ಸಂಪುಟದ ಹಲವು ಸಚಿವರು ಅತಿಥಿಗಳಾಗಿ ಆಗಮಿಸಲಿದ್ದಾರೆ.
ಈ ಬಾರಿಯ ಕಂಬಳೋತ್ಸವದಲ್ಲಿ ವಿಶೇಷ ಆಕರ್ಷಣೆಯಾಗಿ ಸ್ಯಾಂಡಲ್ವುಡ್ ನಟ ‘ರಿಷಬ್ ಶೆಟ್ಟಿ’, ತುಳು ಚಿತ್ರರಂಗದ ತಾರೆಯರಾದ ‘ರೂಪೇಶ್ ಶೆಟ್ಟಿ’, ‘ಅರವಿಂದ ಬೋಳಾರ್’, ‘ದೇವದಾಸ್ ಕಾಪಿಕಾಡ್’ ಮುಂತಾದ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಕ್ರೀಡೆ, ಸಹಕಾರ ಮತ್ತು ಸಮಾಜ ಸೇವೆಯಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಸಾರ್ವಜನಿಕ ಸನ್ಮಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೆ, ಭಾಗವಹಿಸುವ ಕೋಣಗಳ ಯಜಮಾನರಿಗೆ ‘ಬೆಳ್ಳಿಯ ಪದಕ’ ಹಾಗೂ ಟ್ರೋಫಿ ನೀಡಿ ಗೌರವಿಸಲು ನಿರ್ಧರಿಸಲಾಗಿದೆ.
ಕಂಬಳದ ಬೆನ್ನಲ್ಲೇ ಜನವರಿ 12ರಂದು ನರಿಂಗಾನ ಗ್ರಾಮ ಪಂಚಾಯತ್ ಆಶ್ರಯದಲ್ಲಿ ‘ನರಿಂಗಾನ ಗ್ರಾಮೋತ್ಸವ’ ನಡೆಯಲಿದೆ. ಈ ಸ್ನೇಹ ಸಮ್ಮಿಲನದಲ್ಲಿ ಪ್ರತಿಭಾ ಪುರಸ್ಕಾರ, ಸಾಂಸ್ಕೃತಿಕ ವೈವಿಧ್ಯ ಹಾಗೂ ಕ್ರೀಡಾಕೂಟಗಳು ಆಯೋಜನೆಗೊಂಡಿದ್ದು, ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರಶಾಂತ್ ಕಾಜವ ಮಿತ್ತಕೋಡಿ, ನವಾಝ್ ನರಿಂಗಾನ, ಯು.ಕೆ. ಮೋನು ಮತ್ತು ಮ್ಯಾಕ್ಸಿಂ ಡಿಸೋಜ ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿ ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









