ಮಂಗಳೂರು : ಮಂಗಳೂರಿನ ಶಕ್ತಿನಗರದ ಶಕ್ತಿ ರೆಸಿಡೆನ್ಸಿಯಲ್ ಶಾಲೆ ಮತ್ತು ಶಕ್ತಿ ಪದವಿಪೂರ್ವ ಕಾಲೇಜಿಗೆ ಉಡುಪಿ ಶ್ರೀ ಕೃಷ್ಣ ಮಠದ ಭಾವಿ ಪರ್ಯಾಯ ಶಿರೂರು ಮಠದ ಶ್ರೀ ಶ್ರೀ ಶ್ರೀ ವೇದ ವರ್ಧನ ತೀರ್ಥ ಸ್ವಾಮೀಜಿಯವರು ಇಂದು ಭೇಟಿ ನೀಡಿದರು. ಜನವರಿ 18ರಂದು ಉಡುಪಿಯಲ್ಲಿ ನಡೆಯಲಿರುವ ಪರ್ಯಾಯೋತ್ಸವದಲ್ಲಿ ಸರ್ವಜ್ಞ ಪೀಠಾರೋಹಣ ಮಾಡಲಿರುವ ಶ್ರೀಗಳನ್ನು ಶಕ್ತಿ ವಿದ್ಯಾ ಸಂಸ್ಥೆಯ ವತಿಯಿಂದ ಅತ್ಯಂತ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು. ಶಾಲೆಯ ಶಿಕ್ಷಕಿಯರು ಪೂರ್ಣಕುಂಭ ಸ್ವಾಗತ ಕೋರಿದರು ಮತ್ತು ಶ್ರೀಗಳು ಶ್ರೀಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ವಿದ್ಯಾರ್ಥಿಗಳ ಬೆಳಗಿನ ಪ್ರಾರ್ಥನೆಯಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದ ಶ್ರೀಗಳು, ದಾನಗಳಲ್ಲಿ ಅನ್ನದಾನ ಶ್ರೇಷ್ಠವಾದುದಾದರೆ ವಿದ್ಯಾದಾನವು ಮಹಾದಾನವಾಗಿದೆ ಎಂದು ತಿಳಿಸಿದರು. ನಾವೆಲ್ಲರೂ ಶಾಲೆಗೆ ಬರುವುದು ಒಟ್ಟಾಗಿ ಕಲಿಯುವುದಕ್ಕಾಗಿ; ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಪ್ರಾಮಾಣಿಕ ಪ್ರಯತ್ನದ ಜೊತೆಗೆ ಭಗವಂತನ ಪ್ರಾರ್ಥನೆಯೂ ಅಗತ್ಯ ಎಂದು ಕಿವಿಮಾತು ಹೇಳಿದರು. ರಜಾ ದಿನಗಳಲ್ಲಿ ಕೇವಲ ಪ್ರವಾಸಗಳಿಗೆ ಹೋಗುವ ಬದಲು, ಉಡುಪಿಯ ಶ್ರೀಕೃಷ್ಣನ ಸನ್ನಿಧಾನಕ್ಕೆ ಬಂದು ಭಗವಂತನ ಸೇವೆ ಮಾಡುವ ಮೂಲಕ ಕೃಪೆಗೆ ಪಾತ್ರರಾಗಬೇಕು ಎಂದು ಕರೆ ನೀಡಿದರು. ಅಲ್ಲದೆ, ಜನವರಿ 18ರ ಪರ್ಯಾಯೋತ್ಸವಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಮಂತ್ರಣ ನೀಡಿದರು.
ಸಂಸ್ಥೆಯ ಸಂಸ್ಥಾಪಕರಾದ ಡಾ. ಕೆ.ಸಿ. ನ್ಯಾಕ್ ಮತ್ತು ಅವರ ಧರ್ಮಪತ್ನಿ, ಟ್ರಸ್ಟಿ ಶ್ರೀಮತಿ ಸಗುಣ ಸಿ. ನ್ಯಾಕ್ ಅವರು ಶ್ರೀಗಳಿಗೆ ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು. ನಂತರ ಪೂಜ್ಯ ಶ್ರೀಗಳು ಸಂಸ್ಥೆಯ ಪ್ರಮುಖರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ತುಳುನಾಡು ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಪ್ರದೀಪ ಕುಮಾರ್ ಕಲ್ಕೂರ, ಟ್ರಸ್ಟಿ ಸುಧಾಕರ ರಾವ್ ಪೇಜಾವರ, ಪ್ರಧಾನ ಸಲಹೆಗಾರ ರಮೇಶ್ ಕೆ., ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್ ಮೂರ್ತಿ ಹಾಗೂ ಶಾಲಾ ಪ್ರಾಂಶುಪಾಲೆ ಶ್ರೀಮತಿ ಬಬಿತಾ ಸೂರಜ್ ಉಪಸ್ಥಿತರಿದ್ದರು. ಶಿಕ್ಷಕ ಶರಣಪ್ಪ ಕಾರ್ಯಕ್ರಮವನ್ನು ಸ್ವಾಗತಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









