ಮಂಗಳೂರು : ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 24.94 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಎಮ್ಮೆಕೆರೆ ಈಜುಕೊಳದ ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಆಮ್ ಆದ್ಮಿ ಪಕ್ಷದ ಮಂಗಳೂರು ಸಂಶೋಧನಾ ತಂಡ ಗಂಭೀರ ಆರೋಪ ಮಾಡಿದೆ. ಈಜುಕೊಳದ ರಚನೆಯನ್ನು ನೆಲಮಟ್ಟದಿಂದ ಎತ್ತರಿಸಿ ನಿರ್ಮಿಸಿರುವುದಕ್ಕೆ ಪೈಲಿಂಗ್ ಕಾಮಗಾರಿಯ ಅಗತ್ಯವಿದ್ದು, ಇದಕ್ಕಾಗಿ ಪ್ರತಿ ಮೀಟರ್ಗೆ ನಿಗದಿತ 3400 ರೂಪಾಯಿಗಳ ಬದಲಿಗೆ 4234 ರೂಪಾಯಿಗಳಂತೆ ಅತಿಯಾದ ದರ ವಿಧಿಸಿ ಬಿಲ್ ಮಾಡಲಾಗಿದೆ. ಈ ಮೂಲಕ ಅನಗತ್ಯವಾಗಿ 4 ರಿಂದ 6 ಕೋಟಿ ರೂಪಾಯಿಗಳಷ್ಟು ಹೆಚ್ಚುವರಿ ವೆಚ್ಚವನ್ನು ತೋರಿಸಿ ಸರ್ಕಾರಿ ಖಜಾನೆಗೆ ನಷ್ಟ ಉಂಟುಮಾಡಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಸ್. ಎಲ್. ಪಿಂಟೊ ಸುದ್ದಿಗೋಷ್ಠಿಯಲ್ಲಿ ದೂರಿದ್ದಾರೆ.
ಯೋಜನೆಯಲ್ಲಿ ಬಳಸಲಾದ ಉಪಕರಣಗಳ ಬೆಲೆಯನ್ನು ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ತೋರಿಸಲಾಗಿದ್ದು, ನೀರಿನ ಅಡಿಯಲ್ಲಿ ಅಳವಡಿಸಬೇಕಾದ ಎಲ್ಇಡಿ ದೀಪಗಳು ಮತ್ತು ಫಿಲ್ಟರ್ಗಳ ಬೆಲೆಯಲ್ಲಿ ವಂಚನೆ ಎಸಗಲಾಗಿದೆ ಎಂದು ಎಎಪಿ ಆರೋಪಿಸಿದೆ. ದಾಖಲೆಗಳಲ್ಲಿ ನೀರಿನ ಅಡಿಯ ದೀಪಗಳ ವೆಚ್ಚ ನಮೂದಾಗಿದ್ದರೂ ಪ್ರಸ್ತುತ ಅಲ್ಲಿ ಯಾವುದೇ ದೀಪಗಳನ್ನು ಅಳವಡಿಸಿಲ್ಲ ಎಂಬುದು ಗಮನಾರ್ಹ. ರಚನಾತ್ಮಕ ವಿನ್ಯಾಸದ ದೋಷಗಳು ಹಾಗೂ ಇಲ್ಲದ ಉಪಕರಣಗಳಿಗೆ ಹಣ ಪಾವತಿಸಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದ್ದು, ಈ ಇಡೀ ಯೋಜನೆಯ ಬಗ್ಗೆ ಸ್ವತಂತ್ರ ಅಥವಾ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಪಕ್ಷವು ಸರ್ಕಾರವನ್ನು ಒತ್ತಾಯಿಸಿದೆ.
ಕಾಮಗಾರಿಯಲ್ಲಿನ ಲೋಪದೋಷಗಳ ನಡುವೆಯೇ ಈಜುಕೊಳದ ನಿರ್ವಹಣೆಯನ್ನು ಖಾಸಗಿ ಕಂಪನಿಗೆ ವಹಿಸಿರುವುದನ್ನು ಆಕ್ಷೇಪಿಸಿದ ಪಕ್ಷದ ಮುಖಂಡರು, ಇದೊಂದು ವ್ಯವಸ್ಥಿತ ಹಗರಣ ಎಂದು ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್, ಸಾಮಾಜಿಕ ಮಾಧ್ಯಮ ಉಸ್ತುವಾರಿ ದೇವಿಪ್ರಸಾದ್ ಬಜಿಲಕೇರಿ ಹಾಗೂ ಪ್ರಮುಖರಾದ ಲೆಸ್ಲಿ ಫೆರ್ನಾಂಡಿಸ್, ಸುಜಾತ ಯತೀಶ್, ಕಬೀರ್ ಕಾಟಿಪಳ್ಳ, ನಝೀರ್ ಅಹ್ಮದ್ ಬಾವಾ ಉಪಸ್ಥಿತರಿದ್ದು ತನಿಖೆಗೆ ಆಗ್ರಹಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಸುದ್ದಿಗಳು, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿ ಪತ್ರಿಕೆಗಳು









