ಬೆಳ್ತಂಗಡಿ : ಜೈನಪೇಟೆಯಲ್ಲಿರುವ ರತ್ನತ್ರಯ ಜೈನತೀರ್ಥಕ್ಷೇತ್ರದಲ್ಲಿ ಶನಿವಾರ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಮಂಗಲ ಪ್ರವಚನ ನೀಡಿದರು. “ಮತಿ ಇದ್ದಂತೆ ಸ್ಥಿತಿ-ಗತಿ ಇರುತ್ತದೆ” ಎಂದು ಮಾರ್ಮಿಕವಾಗಿ ನುಡಿದ ಅವರು, ಸಮ್ಯಕ್ದರ್ಶನ, ಸಮ್ಯಕ್ಜ್ಞಾನ ಮತ್ತು ಸಮ್ಯಕ್ಚಾರಿತ್ರ ಎಂಬ ರತ್ನತ್ರಯ ಧರ್ಮಗಳನ್ನು ಪಾಲಿಸುವುದೇ ಜೀವನಕ್ಕೆ ನಿಜವಾದ ಅಲಂಕಾರ ಮತ್ತು ಇದು ಮೋಕ್ಷ ಪ್ರಾಪ್ತಿಗೆ ದಾರಿಯಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿದ್ದ ದಿವಂಗತ ಪ್ರೊ. ಎಸ್. ಪ್ರಭಾಕರ್ ಅವರ ಸ್ಮರಣಾರ್ಥ ಹೊರತರಲಾದ “ಧರ್ಮಪ್ರಭಾ” ಕೃತಿಯನ್ನು ಶ್ರೀಗಳು ಬಿಡುಗಡೆಗೊಳಿಸಿದರು. ಪ್ರೊ. ಪ್ರಭಾಕರ್ ಅವರು ಶಿಸ್ತಿನ ಸಿಪಾಯಿಯಾಗಿ, ದಕ್ಷ ಆಡಳಿತಗಾರರಾಗಿ ಮತ್ತು ಆದರ್ಶ ಶ್ರಾವಕರಾಗಿ ಧರ್ಮದ ಹಾದಿಯಲ್ಲಿ ನಡೆದವರು. ಅವರ ಜ್ಞಾನ ಮತ್ತು ಶ್ರದ್ಧೆಯನ್ನು ಗೌರವಿಸುವ ಸಲುವಾಗಿ ಅವರ ಪುತ್ರಿ ಶರ್ಮಿಳಾ ನರೇಂದ್ರ ಅವರು ಈ ಕೃತಿಯನ್ನು ಶಾಸ್ತ್ರದಾನದ ರೂಪದಲ್ಲಿ ಪ್ರಕಟಿಸಿದ್ದಾರೆ ಎಂದು ಸ್ವಾಮೀಜಿ ಸ್ಮರಿಸಿದರು.
ಕಾರ್ಯಕ್ರಮದ ಅಂಗವಾಗಿ ಭಗವಾನ್ ಶ್ರೀ ಶಾಂತಿನಾಥಸ್ವಾಮಿಗೆ 216 ಕಲಶಗಳ ಅಭಿಷೇಕ ಹಾಗೂ ಬ್ರಹ್ಮಯಕ್ಷ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮೃತರ ಆತ್ಮಕ್ಕೆ ಸದ್ಗತಿ ಕೋರಿ ಸಾಮೂಹಿಕವಾಗಿ ಪಂಚನಮಸ್ಕಾರ ಮಂತ್ರವನ್ನು ಪಠಿಸಲಾಯಿತು. ಈ ಸಂದರ್ಭದಲ್ಲಿ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಿ. ರಾಜೇಂದ್ರ ಕುಮಾರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಶೈಕ್ಷಣಿಕ ಕ್ಷೇತ್ರದ ಹಿರಿಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









