ಮಂಗಳೂರು : ಮಂಗಳೂರಿನಲ್ಲಿ ಮಾತನಾಡಿದ ರಾಜಶೇಖರಾನಂದ ಸ್ವಾಮೀಜಿ ಅವರು, ವಿರೋಧ ವ್ಯಕ್ತಪಡಿಸುತ್ತಿರುವ ನಾಯಕರಿಗೆ ಧರ್ಮದ ಬಗ್ಗೆ ಸರಿಯಾದ ಅರಿವಿಲ್ಲ ಎಂದು ಟೀಕಿಸಿದ್ದಾರೆ. “ಜಿಲ್ಲಾಧಿಕಾರಿಗಳು ಸರ್ಕಾರದ ಭಾಗವಾಗಿರಬಹುದು, ಆದರೆ ಅವರದ್ದೇ ಆದ ಧಾರ್ಮಿಕ ಕರ್ತವ್ಯಗಳಲ್ಲಿ ಭಾಗವಹಿಸಲು ಅವರಿಗೆ ಹಕ್ಕಿದೆ. ನಮ್ಮ ಸಂಸ್ಕೃತಿಯಲ್ಲಿ ಭಗವದ್ವಜಕ್ಕೆ ವಿಶೇಷ ಗೌರವವಿದೆ. ಇದನ್ನು ಸರ್ಕಾರವಾಗಲಿ ಅಥವಾ ರಾಜಕೀಯ ನಾಯಕರಾಗಲಿ ನಿರ್ಬಂಧಿಸುವುದು ಸರಿಯಲ್ಲ” ಎಂದು ಅವರು ಪ್ರತಿಪಾದಿಸಿದ್ದಾರೆ.
ತಾರತಮ್ಯದ ಧೋರಣೆಗೆ ಪ್ರಶ್ನೆ
ಹಿಂದೆ ಅನ್ಯಧರ್ಮದ ಜಿಲ್ಲಾಧಿಕಾರಿಗಳು ತಮ್ಮ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದಾಗ ಸರ್ಕಾರವಾಗಲಿ, ಈ ನಾಯಕರಾಗಲಿ ತಡೆದಿದ್ದಾರೆಯೇ? ಎಂದು ಸ್ವಾಮೀಜಿ ಪ್ರಶ್ನಿಸಿದ್ದಾರೆ. “ನಮ್ಮ ಧಾರ್ಮಿಕ ವ್ಯವಸ್ಥೆಯೊಳಗೆ ಅನ್ಯ ಧರ್ಮದ ಅಧಿಕಾರಿಗಳನ್ನು ಕರೆತಂದಾಗ ಇದೇ ನಾಯಕರು ಸಮರ್ಥನೆ ಮಾಡುತ್ತಾರೆ. ಆದರೆ ಈಗ ಜಿಲ್ಲಾಧಿಕಾರಿಗಳ ಪದವಿಗೆ ಕಪ್ಪು ಚುಕ್ಕೆ ತರುವ ಉದ್ದೇಶದಿಂದಲೇ ಇಂತಹ ವಿವಾದಗಳನ್ನು ಸೃಷ್ಟಿಸಲಾಗುತ್ತಿದೆ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೌಹಾರ್ದತೆಯ ನೆಲೆಗಟ್ಟು
ಪರ್ಯಾಯದಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜಾತಿ-ಧರ್ಮದ ಭೇದವಿಲ್ಲದೆ ಎಲ್ಲರೂ ಪಾಲ್ಗೊಳ್ಳುತ್ತಾರೆ. “ಅಲ್ಲಿ ಅನ್ಯ ಧರ್ಮದವರು ತರಕಾರಿ, ಹಣ್ಣು-ಹಂಪಲುಗಳನ್ನು ತರುತ್ತಾರೆ, ಎಲ್ಲರೂ ಒಟ್ಟಾಗಿ ಊಟ ಮಾಡುತ್ತಾರೆ. ಅಲ್ಲಿ ಎಲ್ಲಿಯೂ ಜಾತಿ ಅಥವಾ ಧರ್ಮದ ದ್ವೇಷದ ಭಾವನೆ ಬಂದಿಲ್ಲ. ಹೀಗಿರುವಾಗ ಅನಗತ್ಯವಾಗಿ ಸಮಸ್ಯೆ ಸೃಷ್ಟಿಸುವ ಹುನ್ನಾರ ನಡೆಯುತ್ತಿದೆ” ಎಂದು ಸ್ವಾಮೀಜಿ ಹೇಳಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









