ಮಂಗಳೂರು : ಜಪ್ಪಿನಮೊಗರುವಿನಲ್ಲಿ ಮನ್ಕುತೋಟಗುತ್ತು ಹಾಗೂ ನಾಡಾಜೆಗುತ್ತು ಇವರ ಸ್ಮರಣಾರ್ಥ ಹಮ್ಮಿಕೊಳ್ಳಲಾಗುತ್ತಿರುವ 16ನೇ ವರ್ಷದ ಹೊನಲು ಬೆಳಕಿನ ‘ಜಯ-ವಿಜಯ’ ಜೋಡುಕೆರೆ ಕಂಬಳವು ಫೆಬ್ರವರಿ 14 ಮತ್ತು 15ರಂದು ಅತ್ಯಂತ ಸಂಭ್ರಮದಿಂದ ಜರುಗಲಿದೆ. ಈ ಕುರಿತು ಮಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂಬಳ ಸಮಿತಿಯ ಗೌರವಾಧ್ಯಕ್ಷ ಹಾಗೂ ಶಾಸಕ ಡಿ. ವೇದವ್ಯಾಸ್ ಕಾಮತ್ ಅವರು, ಫೆಬ್ರವರಿ 14ರಂದು ಬೆಳಿಗ್ಗೆ 8:30ಕ್ಕೆ ಶ್ರೀ ಅನಂತಪದ್ಮನಾಭ ಅಸ್ರಣ್ಣರ ಆಶೀರ್ವಚನದೊಂದಿಗೆ ವೇದಮೂರ್ತಿ ಬ್ರಹ್ಮಶ್ರೀ ವಿಠಲದಾಸ್ ತಂತ್ರಿವರ್ಯರು ಈ ಕ್ರೀಡಾಕೂಟವನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಕರಾವಳಿ ಕಾಲೇಜು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಎಸ್. ಗಣೇಶ್ ರಾವ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಅದೇ ದಿನ ಸಂಜೆ 7 ಗಂಟೆಗೆ ನಡೆಯಲಿರುವ ಸಭಾ ಕಾರ್ಯಕ್ರಮದಲ್ಲಿ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸೇರಿದಂತೆ ನಾಡಿನ ಪ್ರಮುಖ ಜನಪ್ರತಿನಿಧಿಗಳು ಹಾಗೂ ಚಲನಚಿತ್ರರಂಗದ ಖ್ಯಾತ ನಟ-ನಟಿಯರು ಭಾಗವಹಿಸಿ ಕಂಬಳದ ಮೆರುಗನ್ನು ಹೆಚ್ಚಿಸಲಿದ್ದಾರೆ. ಈ ಬಾರಿಯ ಕಂಬಳದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳಿಂದ ಸುಮಾರು 150ಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸುವ ನಿರೀಕ್ಷೆಯಿದ್ದು, ಕ್ರೀಡಾಕೂಟದಲ್ಲಿ ವಿಜೇತವಾಗುವ ಕೋಣಗಳ ಮಾಲೀಕರಿಗೆ ಆಕರ್ಷಕ ಚಿನ್ನದ ಪದಕದೊಂದಿಗೆ ಶಾಶ್ವತ ಫಲಕವನ್ನು ನೀಡಿ ಗೌರವಿಸಲಾಗುವುದು ಎಂದು ಸಮಿತಿ ಘೋಷಿಸಿದೆ.
ಸಮಿತಿಯ ಗೌರವ ಸಲಹೆಗಾರ ಜಪ್ಪುಗುಡ್ಡೆ ಗುತ್ತು ಭುಜಂಗೆಟ್ಟಿ ಮತ್ತು ಕಂಬಳ ಸಮಿತಿ ಅಧ್ಯಕ್ಷ ಮನ್ಕುತೋಟಗುತ್ತು ಅನಿಲ್ ಜೆ. ಶೆಟ್ಟಿ ಅವರು ಮಾತನಾಡಿ, ಈ ಕಂಬಳದಲ್ಲಿ ಶಿಸ್ತು ಮತ್ತು ಸಮಯ ಪಾಲನೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು. ಜೋಡುಕೆರೆ ಕಂಬಳ ಮತ್ತು ತಿರುವೈಲು ಕಂಬಳಗಳು ಈಗಾಗಲೇ ಸಮಯ ನಿಗದಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಇದು ಇತರ ಕಂಬಳಗಳಿಗೂ ಮಾದರಿಯಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ವೀಣಾ ಮಂಗಳ, ಪ್ರವೀಣಚಂದ್ರ ಆಳ್ವ ತಿರುವೈಲ್ ಗುತ್ತು, ಶಕೀನ್ ಶೆಟ್ಟಿ, ಸಂದೀಪ್ ಶೆಟ್ಟಿ, ನಿಶಾನ್ ಪೂಜಾರಿ, ಪ್ರಚಾರ ಸಮಿತಿ ಸಂಚಾಲಕ ಜೆ. ನಾಗೇಂದ್ರ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









