ಬೆಂಗಳೂರು : ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ನಾಡಿನ ಜನತೆಗೆ ಸಂದೇಶ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಸಂವಿಧಾನದ ಮಹತ್ವ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲವಾಗಿ ಪ್ರತಿಪಾದಿಸಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದ ಈ ಐತಿಹಾಸಿಕ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿಯವರು, ಭಾರತದ ಸಂವಿಧಾನವು ಕೇವಲ ಆಡಳಿತದ ಪುಸ್ತಕವಲ್ಲ, ಅದು ಶೋಷಿತರ, ಮಹಿಳೆಯರ ಮತ್ತು ಸಾಮಾನ್ಯ ಜನರ ಬದುಕಿಗೆ ಹಕ್ಕು ನೀಡಿದ ಮಹಾನ್ ಅಸ್ತ್ರವಾಗಿದೆ ಎಂದರು. ಕರ್ನಾಟಕದಲ್ಲಿ 800 ವರ್ಷಗಳ ಹಿಂದೆಯೇ ಬಸವಣ್ಣನವರ ‘ಅನುಭವ ಮಂಟಪ’ದ ಮೂಲಕ ಪ್ರಜಾಪ್ರಭುತ್ವದ ಬೀಜಾಂಕುರವಾಗಿತ್ತು ಎಂಬುದನ್ನು ಹೆಮ್ಮೆಯಿಂದ ಸ್ಮರಿಸಿದ ಅವರು, ಇಂದಿನ ಸಂವಿಧಾನದ ಆಶಯಗಳು ಆ ಪುರಾತನ ಸಮಾನತೆಯ ತತ್ವಗಳ ಮುಂದುವರಿಕೆಯಾಗಿದೆ ಎಂದು ಬಣ್ಣಿಸಿದರು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ಭಾರತದ ಅಲಿಖಿತ ಮತ್ತು ಅಸಮಾನತೆಯಿಂದ ಕೂಡಿದ ಹಳೆಯ ವ್ಯವಸ್ಥೆಯನ್ನು ಮೆಟ್ಟಿ ನಿಂತಿದೆ ಎಂದು ಪ್ರತಿಪಾದಿಸಿದ ಸಿದ್ದರಾಮಯ್ಯ, ಸಂವಿಧಾನ ಬರುವುದಕ್ಕೂ ಮುನ್ನ ಶೂದ್ರರು, ಮಹಿಳೆಯರು ಮತ್ತು ದಲಿತರು ಜ್ಞಾನ ಮತ್ತು ಘನತೆಯಿಂದ ವಂಚಿತರಾಗಿದ್ದರು ಎಂಬುದನ್ನು ನೆನಪಿಸಿದರು. ಕೇವಲ ರಾಜಕೀಯ ಸ್ವಾತಂತ್ರ್ಯ ದೊರೆತರೆ ಸಾಲದು, ಸಾಮಾಜಿಕ ಮತ್ತು ಆರ್ಥಿಕ ಸಮಾನತೆ ದೊರೆತಾಗ ಮಾತ್ರ ದೇಶ ಆಂತರಿಕವಾಗಿ ಸದೃಢಗೊಳ್ಳುತ್ತದೆ. ನಮ್ಮ ಸರ್ಕಾರದ ಎಲ್ಲಾ ಯೋಜನೆಗಳು ಸಂವಿಧಾನದ 39, 15(3) ಮತ್ತು 47ನೇ ಪರಿಚ್ಛೇದಗಳ ಆಶಯದಂತೆ ರೂಪಿತವಾಗಿದ್ದು, ಹಸಿವು ಮುಕ್ತ ಮತ್ತು ಭಯ ಮುಕ್ತ ಸಮಾಜ ನಿರ್ಮಾಣ ಮಾಡುವುದು ಸರ್ಕಾರದ ಆದ್ಯತೆಯಾಗಿದೆ ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ವಿವರಿಸಿದ ಅವರು, ಇವು ಕೇವಲ ಉಚಿತ ಯೋಜನೆಗಳಲ್ಲ ಬದಲಾಗಿ ‘ಸಾರ್ವತ್ರಿಕ ಮೂಲ ಆದಾಯ’ (Universal Basic Income) ಕಲ್ಪನೆಯಡಿ ನೀಡುತ್ತಿರುವ ಸಾಮಾಜಿಕ ಭದ್ರತೆಯಾಗಿದೆ ಎಂದು ಸಮರ್ಥಿಸಿಕೊಂಡರು. ಅನ್ನಭಾಗ್ಯದ ಮೂಲಕ ಆಹಾರ ಭದ್ರತೆ, ಗೃಹಲಕ್ಷ್ಮಿಯ ಮೂಲಕ ಮಹಿಳಾ ಸಬಲೀಕರಣ, ಮತ್ತು ಶಕ್ತಿ ಯೋಜನೆಯ ಮೂಲಕ ಮಹಿಳೆಯರ ಸ್ವಾವಲಂಬನೆ ಸಾಧ್ಯವಾಗಿದೆ. ಈ ಯೋಜನೆಗಳಿಂದಾಗಿ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ತಿಂಗಳಿಗೆ 5 ರಿಂದ 6 ಸಾವಿರ ರೂಪಾಯಿಗಳವರೆಗೆ ಉಳಿತಾಯ ಮಾಡುತ್ತಿದ್ದು, ಈ ಹಣವು ಜನರ ಜೀವನಮಟ್ಟವನ್ನು ಸುಧಾರಿಸಲು ಮತ್ತು ಮಕ್ಕಳ ಶಿಕ್ಷಣಕ್ಕೆ ಬಳಕೆಯಾಗುತ್ತಿದೆ. ಇದು ಸಂವಿಧಾನದ ಆಶಯವಾದ ಸಂಪತ್ತಿನ ಸಮಾನ ಹಂಚಿಕೆಗೆ ಪೂರಕವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಸಂವಿಧಾನ ವಿರೋಧಿ ಶಕ್ತಿಗಳ ಬಗ್ಗೆ ಎಚ್ಚರಿಕೆ ನೀಡಿದ ಮುಖ್ಯಮಂತ್ರಿಯವರು, ಸಂವಿಧಾನವನ್ನು ನೇರವಾಗಿ ಎದುರಿಸಲಾಗದವರು ಅದನ್ನು ನಿಧಾನವಾಗಿ ದುರ್ಬಲಗೊಳಿಸುವ ‘ವಿಷ ಉಣಿಸುವ ಸಂಚು’ ನಡೆಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು. ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತತೆಯನ್ನು ಕಿತ್ತುಕೊಳ್ಳುವ ಮೂಲಕ ಸಂವಿಧಾನವನ್ನು ಅಪ್ರಸ್ತುತಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ನಾಗರಿಕರು ಎಚ್ಚರದಿಂದಿರಬೇಕು. ಸಂವಿಧಾನವನ್ನು ನಾವು ರಕ್ಷಿಸಿದರೆ ಮಾತ್ರ ಸಂವಿಧಾನ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ ಪ್ರತಿ ಪ್ರಜೆಯೂ ಸಂವಿಧಾನ ರಕ್ಷಿಸುವ ಪ್ರತಿಜ್ಞೆ ಮಾಡಬೇಕು ಎಂದು ಕರೆ ನೀಡಿದರು. ಸಮಸಮಾಜದ ನಿರ್ಮಾಣಕ್ಕಾಗಿ ಸರ್ವರಿಗೂ ಸಮಪಾಲು, ಸಮಬಾಳು ಎಂಬ ತತ್ವದಡಿ ಶಕ್ತಿಶಾಲಿ ಕರ್ನಾಟಕ ಕಟ್ಟಲು ಜನರ ಸಹಕಾರವನ್ನು ಕೋರುತ್ತಾ ತಮ್ಮ ಭಾಷಣ ಮುಕ್ತಾಯಗೊಳಿಸಿದರು.
ರಾಜ್ಯಪಾಲರಾದ ಥೇವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ವಿಧಾನ ಪರಿಷತ್ ಮುಖ್ಯ ಸಚೇತಕರಾದ ಸಲೀಂ ಅಹಮದ್, ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜು, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜ್ಯ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









