ಮಂಗಳೂರು : ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆದ 77ನೇ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು, ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆಯ ಬಗ್ಗೆ ಕಠಿಣ ಸಂದೇಶ ರವಾನಿಸಿದರು. ಯಾವುದೇ ವ್ಯಕ್ತಿ ಅಥವಾ ಶಕ್ತಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಯುವಕರನ್ನು ದಾರಿ ತಪ್ಪಿಸಿ ಹಿಂಸಾತ್ಮಕ ಚಟುವಟಿಕೆಗಳಿಗೆ ಪ್ರೇರೇಪಿಸುವುದನ್ನು ಸರ್ಕಾರ ಎಂದಿಗೂ ಸಹಿಸುವುದಿಲ್ಲ. ಇಂತಹ ವಿಚ್ಛಿದ್ರಕಾರಿ ಕೃತ್ಯಗಳ ವಿರುದ್ಧ ಯಾವುದೇ ಹಿಂಜರಿಕೆಯಿಲ್ಲದೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು. ಸಮಾಜದಲ್ಲಿ ಶಾಂತಿ ಮತ್ತು ಸಮನ್ವಯತೆ ನೆಲೆಸಿದ್ದಾಗ ಮಾತ್ರ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲೆಯ ಜನರ ಜೀವನಮಟ್ಟ ಸುಧಾರಣೆಗೆ ಕಾನೂನು ಸುವ್ಯವಸ್ಥೆ ಅತಿ ಮುಖ್ಯವಾಗಿದ್ದು, ಪ್ರತಿಯೊಬ್ಬರೂ ಇತರ ಧರ್ಮಗಳ ನೈಜ ಆಶಯಗಳನ್ನು ಗೌರವಿಸಬೇಕು ಎಂದು ಸಚಿವರು ಕರೆ ನೀಡಿದರು. ಸರ್ಕಾರದ ಕಠಿಣ ಕ್ರಮಗಳಿಂದಾಗಿ ಜಿಲ್ಲೆಯಲ್ಲಿ ಸುವ್ಯವಸ್ಥೆ ಸುಧಾರಿಸಿದ್ದು, ಇದು ಸ್ಥಳೀಯವಾಗಿ ಉದ್ಯೋಗಾವಕಾಶಗಳ ಸೃಜನೆಗೆ ಬಲವಾದ ನೆಲೆ ಒದಗಿಸಿದೆ. ಇದರಿಂದ ಇಲ್ಲಿನ ಯುವಕರು ಉದ್ಯೋಗಕ್ಕಾಗಿ ಬೇರೆ ರಾಜ್ಯ ಅಥವಾ ದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸಾಧ್ಯವಾಗಲಿದೆ. ಅಭಿವೃದ್ಧಿಗೆ ಅಡ್ಡಿಯಾಗುವ ಸಮಾಜ ವಿರೋಧಿ ಶಕ್ತಿಗಳ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಂಡು ಸರ್ಕಾರದೊಂದಿಗೆ ಸಹಕರಿಸಬೇಕು ಎಂದು ಅವರು ವಿನಂತಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿ ಯೋಜನೆಗಳ ಕುರಿತು ಮಾಹಿತಿ ನೀಡಿದ ಸಚಿವರು, ಸುಮಾರು 37 ಕೋಟಿ ರೂಪಾಯಿ ವೆಚ್ಚದಲ್ಲಿ ಮಂಗಳೂರು ಮೀನುಗಾರಿಕಾ ಬಂದರನ್ನು ಆಧುನೀಕರಿಸಲಾಗುತ್ತಿದೆ ಎಂದು ತಿಳಿಸಿದರು. ಈ ಯೋಜನೆಯಡಿ 320 ಮೀಟರ್ ಉದ್ದದ ಹೊಸ ಜೆಟ್ಟಿ ನಿರ್ಮಾಣ, ಹರಾಜು ಮಳಿಗೆಗಳ ಪುನರ್ ನಿರ್ಮಾಣ ಹಾಗೂ ಅತ್ಯಾಧುನಿಕ ಮೂಲಸೌಕರ್ಯಗಳನ್ನು ಒದಗಿಸಲಾಗುತ್ತಿದ್ದು, ಇದು ಮೀನುಗಾರರ ದಶಕಗಳ ಬೇಡಿಕೆಯನ್ನು ಈಡೇರಿಸಲಿದೆ. ಈ ಕಾಮಗಾರಿಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಸಾರ್ವಜನಿಕ ಬಳಕೆಗೆ ಸಮರ್ಪಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಕೇಂದ್ರ ಸರ್ಕಾರದ ನೀತಿಗಳನ್ನು ಟೀಕಿಸಿದ ಸಚಿವರು, ಬಡವರಿಗೆ ಉದ್ಯೋಗದ ಹಕ್ಕನ್ನು ನೀಡಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು (MGNREGA) ರದ್ದುಗೊಳಿಸಿರುವ ಕ್ರಮವು ಜನವಿರೋಧಿಯಾಗಿದೆ ಎಂದು ದೂರಿದರು. ವಿಕೇಂದ್ರಿಕರಣದ ತತ್ವಕ್ಕೆ ವಿರುದ್ಧವಾಗಿ ಅಧಿಕಾರವನ್ನು ಕೇಂದ್ರದ ಹಿಡಿತಕ್ಕೆ ಒಪ್ಪಿಸುವ ಇಂತಹ ಯೋಜನೆಗಳು ಸಂವಿಧಾನಬಾಹಿರವಾಗಿದ್ದು, ರಾಜ್ಯಗಳ ಹಕ್ಕನ್ನು ಮೊಟಕುಗೊಳಿಸುತ್ತವೆ. ಇಂತಹ ಬಡವರ ವಿರೋಧಿ ನಿಲುವುಗಳನ್ನು ರಾಜ್ಯ ಸರ್ಕಾರ ಕಾನೂನಾತ್ಮಕವಾಗಿ ಮತ್ತು ನೈತಿಕವಾಗಿ ವಿರೋಧಿಸುತ್ತದೆ ಎಂದು ಅವರು ಗುಡುಗಿದರು.
ಕಾರ್ಯಕ್ರಮದಲ್ಲಿ ಸಾಧಕರಿಗೆ ಗೌರವ ಸಲ್ಲಿಸಲಾಯಿತು. ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಹತ್ತು ವಿದ್ಯಾರ್ಥಿಗಳಿಗೆ ತಲಾ 50,000 ರೂ. ನಗದು ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಅಪಘಾತರಹಿತ ಸೇವೆ ಸಲ್ಲಿಸಿದ ಕೆಎಸ್ಆರ್ಟಿಸಿ ಚಾಲಕರಿಗೆ ಬೆಳ್ಳಿ ಪದಕ ಹಾಗೂ ಮರಣೋತ್ತರ ಅಂಗಾಂಗ ದಾನ ಮಾಡಿದ ಸಿಂಧು ಶ್ರೀ ಅವರ ಕುಟುಂಬವನ್ನು ಅಭಿನಂದಿಸಲಾಯಿತು. ಐಪಿಎಸ್ ಅಧಿಕಾರಿ ಅನನ್ಯ ಶ್ರೀವಾಸ್ತವ ಅವರ ನೇತೃತ್ವದಲ್ಲಿ ನಡೆದ ಆಕರ್ಷಕ ಪರೇಡ್ ಮತ್ತು ವಿವಿಧ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರದರ್ಶನಗಳು ಗಣರಾಜ್ಯೋತ್ಸವದ ಮೆರುಗನ್ನು ಹೆಚ್ಚಿಸಿದವು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









