ಮಂಗಳೂರು : ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಯನ್ನು ಸಂಪರ್ಕಿಸುವ ಅತ್ಯಾಧುನಿಕ ತಂತ್ರಜ್ಞಾನದ ‘ಬೋ ಸ್ಟ್ರಿಂಗ್’ ಸೇತುವೆ ಕಾಮಗಾರಿಯು ಸೆಪ್ಟೆಂಬರ್ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಶುಕ್ರವಾರ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವರು, ಸ್ಮಾರ್ಟ್ ಸಿಟಿ ಯೋಜನೆಯಡಿ 64 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಸೇತುವೆಯು ಬೆಂಗ್ರೆ ಪ್ರದೇಶದ ಸುಮಾರು 4,000 ಕುಟುಂಬಗಳಿಗೆ ವರದಾನವಾಗಲಿದೆ ಎಂದರು. ಪ್ರಸ್ತುತ ದೋಣಿ ಅಥವಾ ಅರ್ಧ ಗಂಟೆಯ ಬಳಸು ದಾರಿಯನ್ನು ಅವಲಂಬಿಸಿರುವ ಸ್ಥಳೀಯರ ಪ್ರಯಾಣ ಸಮಯ ಈ ಸೇತುವೆಯಿಂದ ಕೇವಲ 10 ನಿಮಿಷಗಳಿಗೆ ಇಳಿಕೆಯಾಗಲಿದೆ.
ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ವಾಹನ ಸಂಚಾರಕ್ಕಾಗಿ ಇಂತಹ ಬೋ ಸ್ಟ್ರಿಂಗ್ ಮಾದರಿಯ ಸೇತುವೆ ನಿರ್ಮಿಸಲಾಗುತ್ತಿದ್ದು, ಇದು 285 ಮೀಟರ್ ಉದ್ದವನ್ನು ಹೊಂದಿದೆ. ರಾಷ್ಟ್ರೀಯ ಜಲಮಾರ್ಗದ ನಿಯಮಾವಳಿಗಳಂತೆ ನದಿಯಲ್ಲಿ ದೋಣಿಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೀರಿನ ಮಟ್ಟದಿಂದ 10 ಮೀಟರ್ ಎತ್ತರದಲ್ಲಿ ಈ ಸೇತುವೆಯನ್ನು ವಿನ್ಯಾಸಗೊಳಿಸಲಾಗಿದೆ. ಜೂನ್ ತಿಂಗಳಿನಲ್ಲಿ ಬೋ ಸ್ಟ್ರಿಂಗ್ ಮೇಲೆತ್ತುವ ಪ್ರಮುಖ ಪ್ರಕ್ರಿಯೆ ನಡೆಯಲಿದ್ದು, ಇದು ಪ್ರವಾಸೋದ್ಯಮ ಮತ್ತು ಬ್ಲೂಫ್ಲಾಗ್ ಬೀಚ್ಗೆ ಎರಡನೇ ಪ್ರಮುಖ ಸಂಪರ್ಕ ರಸ್ತೆಯಾಗಿ ವಾಣಿಜ್ಯ ಚಟುವಟಿಕೆಗಳಿಗೆ ವೇಗ ನೀಡಲಿದೆ.
ಸೇತುವೆ ಪರಿಶೀಲನೆಯ ಜೊತೆಗೆ ಮುಂಬರುವ ಮಳೆಗಾಲದ ಮುಂಜಾಗೃತಾ ಕ್ರಮಗಳ ಬಗ್ಗೆಯೂ ಸಚಿವರು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಪ್ರವಾಹ ಮತ್ತು ಭೂಕುಸಿತ ತಡೆಯಲು 80 ಕೋಟಿ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಹಾಗೂ 9 ಕೋಟಿ ರೂ. ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಮುಂತಾದ ಅಧಿಕಾರಿಗಳ ಜೊತೆ ಸಭೆ ನಡೆಸಿ ಸನ್ನದ್ಧರಾಗಿರಲು ಸೂಚನೆ ನೀಡಲಾಗಿದೆ. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









