ಬಂಟ್ವಾಳ: ಆಟಿ ಅಮಾವಾಸ್ಯೆಯ ಪವಿತ್ರ ದಿನದಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ನರಹರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕ್ಷೇತ್ರದಲ್ಲಿ ನಡೆದಿರುವ ಜೀರ್ಣೋದ್ಧಾರ ಕಾಮಗಾರಿಗಳನ್ನು ವೀಕ್ಷಿಸಿದ ಶಾಸಕರು, ದೇವಸ್ಥಾನದ ಅಭಿವೃದ್ಧಿ ಕಾರ್ಯಗಳ ಕುರಿತು ಆಡಳಿತ ಮಂಡಳಿಯ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿದರು.
ನರಹರಿ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ದ್ವಿಪಥ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ₹2 ಕೋಟಿ ವೆಚ್ಚದಲ್ಲಿ ಈಗಾಗಲೇ ಪೂರ್ಣಗೊಂಡಿದ್ದು, ಡಾಮರೀಕರಣಗೊಂಡ ರಸ್ತೆಯನ್ನು ಶಾಸಕರು ವೀಕ್ಷಿಸಿದರು. ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಹಾಗೂ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಕೈಗೊಂಡಿರುವ ಈ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿರುವುದಕ್ಕೆ ದೇವಸ್ಥಾನದ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿತು.
ಕ್ಷೇತ್ರದ ಅಭಿವೃದ್ಧಿ ಹಾಗೂ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ರಾಜೇಶ್ ನಾಯ್ಕ್ ಅವರು ನೀಡಿರುವ ಸಹಕಾರವನ್ನು ದೇವಸ್ಥಾನದ ಆಡಳಿತ ಮಂಡಳಿ ಶ್ಲಾಘಿಸಿತು. ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ನೀಡುತ್ತಿರುವ ಆದ್ಯತೆ ಹಾಗೂ ಸಹಕಾರಕ್ಕೆ ಆಡಳಿತ ಮಂಡಳಿಯ ಪದಾಧಿಕಾರಿಗಳು ಕೃತಜ್ಞತೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಪ್ರಶಾಂತ್ ಮಾರ್ಲ ಹಾಗೂ ಟ್ರಸ್ಟಿಗಳು ಉಪಸ್ಥಿತರಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









