ಮಂಗಳೂರು : ತ್ರಿಷಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ತನ್ನ 28ನೇ ವರ್ಷದ ಸಂಸ್ಥಾಪನಾ ದಿನೋತ್ಸವವನ್ನು ಮಂಗಳೂರಿನ ಬಲ್ಮಠದಲ್ಲಿರುವ ಡಾನ್ ಬಾಸ್ಕೊ ಸಭಾಂಗಣದಲ್ಲಿ ವಿಜೃಂಭಣೆಯಿಂದ ನೆರವೇರಿಸಿತು. ಪ್ರಾರ್ಥನೆ, ವಿದ್ಯಾರ್ಥಿಗಳ ಸ್ವಾಗತ ನೃತ್ಯ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮದಲ್ಲಿ ತ್ರಿಷಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಮಂಜುನಾಥ ಕಾಮತ್ ಸಂಸ್ಥೆಯ ಶೈಕ್ಷಣಿಕ ಪಯಣವನ್ನು ಸ್ಮರಿಸಿ ಎಲ್ಲರನ್ನೂ ಸ್ವಾಗತಿಸಿದರು. ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಡಾ. ನಾರಾಯಣ ಕಾಯರ್ಕಟ್ಟೆ ಗೌರವ ಅತಿಥಿಯಾಗಿ ಭಾಗವಹಿಸಿದ್ದರೆ, ಸಂಸ್ಥಾಪಕರಾದ ಸಿಎ ಗೋಪಾಲ ಕೃಷ್ಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ವೈಭವದ ಸಮಾರಂಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಪ್ರಮುಖ ಸಾಧಕರನ್ನು ಗುರುತಿಸಿ ಗೌರವಿಸಲಾಯಿತು. ಶಿಕ್ಷಣ ಕ್ಷೇತ್ರದಿಂದ ಡಾ. ದೇವರಾಜ್ ಕೆ, ಕೈಗಾರಿಕಾ ರಂಗದಿಂದ ಶ್ರೀ ಮೈತ್ರೇಯ ಎ, ಯಕ್ಷಗಾನದಿಂದ ಯಕ್ಷಗುರು ರಾಕೇಶ್ ರೈ ಅಡ್ಕ, ವೈದ್ಯಕೀಯ ವಿಭಾಗದಿಂದ ಡಾ. ಮಧುಸೂದನ್ ಇ, ಕ್ರೀಡಾ ಕ್ಷೇತ್ರದಿಂದ ಅಂತರಾಷ್ಟ್ರೀಯ ಅಥ್ಲೀಟ್ ಶ್ರೀಮಾ ಪ್ರಿಯದರ್ಶಿನಿ, ಸಮಾಜ ಸೇವೆಯಿಂದ ಶ್ರೀ ಅನಿಲ್ ಚರಣ್, ರೆಡ್ಕ್ರಾಸ್ ಸೇವೆಯಿಂದ ಸಿಎ ಶಾಂತಾರಾಮ ಶೆಟ್ಟಿ, ಸೇನಾ ಕ್ಷೇತ್ರದಿಂದ ಶ್ರೀ ವಿಕ್ರಮದತ್ತ, ಚಲನಚಿತ್ರ-ರಂಗಭೂಮಿಯಿಂದ ಕುಮಾರಿ ರೂಪಾ ವರ್ಕಾಡಿ ಹಾಗೂ ಮಾಧ್ಯಮ ಕ್ಷೇತ್ರದಿಂದ ಕದ್ರಿ ಶ್ರೀ ನವನೀತ್ ಶೆಟ್ಟಿ ಅವರಿಗೆ ಸನ್ಮಾನ ನೆರವೇರಿಸಲಾಯಿತು.
ಇದೇ ಸಂದರ್ಭದಲ್ಲಿ ಗೌರವ ಅತಿಥಿ ಡಾ. ನಾರಾಯಣ ಕಾಯರ್ಕಟ್ಟೆ, ಸಿದ್ಧಾಂತ್ ಫೌಂಡೇಶನ್ ಟ್ರಸ್ಟಿ ಶ್ರೀ ರಾಮ್ ಪ್ರಭು, ಸಂಸ್ಥಾಪಕ ಸಿಎ ಗೋಪಾಲಕೃಷ್ಣ ಭಟ್ ಹಾಗೂ ನಮಿತಾ ಜಿ. ಭಟ್ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ತ್ರಿಷಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸುಪ್ರಭಾ ಎಂ. ಧನ್ಯವಾದ ಸಲ್ಲಿಸಿದರು. ವೇದಿಕೆಯಲ್ಲಿ ತ್ರಿಷಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಯಶಸ್ವಿನಿ ಯಶ್ಪಾಲ್, ಸಂಸ್ಥಾಪಕರ ಗುರುಗಳಾದ ಮುಕುಂದ್ ಮಾಸ್ಟರ್ ಸೇರಿದಂತೆ ಆಡಳಿತ ಮಂಡಳಿ, ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅಧ್ಯಕ್ಷೀಯ ಭಾಷಣ ಮಾಡಿದ ಸಿಎ ಗೋಪಾಲ ಕೃಷ್ಣ ಭಟ್ ಅವರು, ಜಗತ್ತಿನಲ್ಲಿ ಕೆಲವರು ಮಾತ್ರ ಇತಿಹಾಸ ಅಥವಾ ನಕ್ಷೆಯನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿರುತ್ತಾರೆ ಎಂದರು. ತಮ್ಮ ಕೃಷಿ ಹಿನ್ನೆಲೆ ಹಾಗೂ ದೇಶಪ್ರೇಮದ ಬಗ್ಗೆ ಮಾತನಾಡುತ್ತಾ, ಒಬ್ಬ ವ್ಯಕ್ತಿ ಒಂದು ಸಂಸ್ಥೆಯನ್ನು ಕಟ್ಟಿ ಬೆಳೆಸಬಹುದಾದರೆ, ಯುವ ವಿದ್ಯಾರ್ಥಿಗಳು ಇಂತಹ ಸಾವಿರಾರು ಸಂಸ್ಥೆಗಳನ್ನು ಹುಟ್ಟುಹಾಕಬಹುದು ಎಂದು ಪ್ರೇರೇಪಿಸಿದರು. ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದ ಅವರು, ಆ ಬಳಿಕ ನೆರವೇರಿದ ವಿದ್ಯಾರ್ಥಿಗಳ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ದಿನಾಚರಣೆಗೆ ವಿಶೇಷ ಮೆರುಗು ನೀಡಿದವು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









