ಮಂಗಳೂರು : ಬಿಜೆಪಿ ಪಕ್ಷವು ದೇಶದ ಬಹುಸಂಖ್ಯಾತ ಹಿಂದೂಗಳಲ್ಲಿ ತಮಗೆ ಭದ್ರತೆಯಿಲ್ಲ ಮತ್ತು ಅನ್ಯಾಯವಾಗುತ್ತಿದೆ ಎಂಬ ಸುಳ್ಳು ಆತಂಕವನ್ನು ಬಿತ್ತುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂಗಳು ಭಯದಲ್ಲಿದ್ದಾರೆ ಮತ್ತು ಅರಾಜಕತೆ ಸೃಷ್ಟಿಯಾಗಿದೆ ಎಂದು ಬಿಂಬಿಸುವುದೇ ಬಿಜೆಪಿಯ ಮುಖ್ಯ ಅಜೆಂಡಾವಾಗಿದೆ. ಇಂತಹ ಆಧಾರರಹಿತ ಭಯದ ವಾತಾವರಣವನ್ನು ಬಂಡವಾಳವಾಗಿಸಿಕೊಂಡು ದೇಶ ಆಳಲು ಅವರು ಹೊರಟಿದ್ದಾರೆ, ಆದರೆ ವಾಸ್ತವದಲ್ಲಿ ಭಾರತದಲ್ಲಿ ಇಂತಹ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ ಎಂದು ಸ್ಪಷ್ಟಪಡಿಸಿದರು.
ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಸಚಿವರು, ದೇಶದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿದೆ ಎಂದರು. ಯುಪಿಎ ಸರ್ಕಾರದ ಅವಧಿಯಲ್ಲಿ ಆರ್ಥಿಕತೆ ಬಗ್ಗೆ ದೊಡ್ಡ ಭಾಷಣಗಳನ್ನು ಮಾಡುತ್ತಿದ್ದ ನರೇಂದ್ರ ಮೋದಿಯವರ ಆಡಳಿತದಲ್ಲಿ ಇಂದು ಭಾರತೀಯ ರೂಪಾಯಿಯ ಮೌಲ್ಯವು ಕೇವಲ ಅಮೆರಿಕದ ಡಾಲರ್ ಎದುರು ಮಾತ್ರವಲ್ಲದೆ, ನೆರೆಯ ಪಾಕಿಸ್ತಾನ ಹಾಗೂ ಬಾಂಗ್ಲಾದೇಶದ ಕರೆನ್ಸಿಗಳಿಗಿಂತಲೂ ತಳಮಟ್ಟಕ್ಕೆ ಕುಸಿದಿದೆ. ಹೀಗಾಗಿ ಮೋದಿಯವರ ವಿದೇಶಾಂಗ ಮತ್ತು ಆರ್ಥಿಕ ನೀತಿಗಳು ದೇಶವನ್ನು ಎತ್ತ ಕೊಂಡೊಯ್ಯುತ್ತಿವೆ ಎಂಬುದು ಯಾರಿಗೂ ಅರ್ಥವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತವು ಜಾಗತಿಕ ಮಟ್ಟದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿದೆ ಎಂದು ಪ್ರಚಾರ ಮಾಡಲಾಗುತ್ತಿದೆಯಾದರೂ, ದೇಶದ ಜಿಡಿಪಿ ಆಡಳಿತಾತ್ಮಕ ವೈಫಲ್ಯದಿಂದಾಗಿ ಆರನೇ ಸ್ಥಾನಕ್ಕೆ ಕುಸಿದಿದೆ ಎಂದು ದಿನೇಶ್ ಗುಂಡೂರಾವ್ ಲೇವಡಿ ಮಾಡಿದರು. ದೇಶದಲ್ಲಿ ಆಡಳಿತಾರೂಢರ ವಿರುದ್ಧ ಎಷ್ಟು ಅಸಮಾಧಾನವಿದೆ ಎಂದರೆ, ಬಿಜೆಪಿ ಪಕ್ಷದ ಸದಸ್ಯತ್ವಕ್ಕಿಂತ ‘ಕಾಕ್ರೋಚ್ ಜನತಾ ಪಾರ್ಟಿ’ಯ ಚಂದಾದಾರಿಕೆಯೇ ಹೆಚ್ಚಾಗಿದೆ ಎಂದು ವ್ಯಂಗ್ಯವಾಡಿದರು. ಇದೇ ವೇಳೆ ಕಾಂಗ್ರೆಸ್ ಸಭೆಯೊಂದರಲ್ಲಿ ಕೇಳಿಬಂದಿದೆ ಎನ್ನಲಾದ ‘ನಾನು ಕಾಕ್ರೋಚ್’ ಘೋಷಣೆಯ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದು ಅವರು ಸ್ಪಷ್ಟನೆ ನೀಡಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









