ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರನ್ನು ತೀವ್ರವಾಗಿ ಕಾಡುತ್ತಿರುವ ಇ-ಖಾತಾ ಗೊಂದಲ ಹಾಗೂ ಮೂಲಸೌಕರ್ಯಗಳ ಕೊರತೆಯ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಅವರು ರಾಜ್ಯ ಸರ್ಕಾರವನ್ನು ಅಧಿವೇಶನದಲ್ಲಿ ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ ಯಾವುದೇ ಹೊಸ ನಿಯಮಗಳು ಬಂದಾಗ ಅದನ್ನು ಮಂಗಳೂರಿನಲ್ಲೇ ಪ್ರಾಯೋಗಿಕವಾಗಿ ಜಾರಿಗೆ ತರುವ ಸರ್ಕಾರದ ಧೋರಣೆಯಿಂದಾಗಿ ಸ್ಥಳೀಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಜಿಪಿಎಸ್ ಆಧಾರಿತ ವ್ಯವಸ್ಥೆ ಸರಿಯಾಗಿದ್ದರೂ, ಹೊಸ ತಂತ್ರಾಂಶ ಜಾರಿಯಾದಾಗಿನಿಂದ ಇ-ಖಾತಾ ಪ್ರಕ್ರಿಯೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸರ್ವರ್ ಸಮಸ್ಯೆ ಇಲ್ಲವೆಂದು ಸಚಿವರು ಹೇಳುತ್ತಿರುವುದು ವಾಸ್ತವಕ್ಕೆ ದೂರವಾದ ಸಂಗತಿ ಎಂದು ಅವರು ಆಕ್ಷೇಪಿಸಿದರು.
ನಗರದ ರಸ್ತೆಗಳು ಕಳೆದ ಮಳೆಗಾಲದ ಭಾರಿ ಮಳೆಗೆ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಇದರೊಂದಿಗೆ ಬೀದಿ ದೀಪಗಳ ನಿರ್ವಹಣೆಯಲ್ಲಿ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ನಗರವು ಕತ್ತಲಲ್ಲಿ ಮುಳುಗುವಂತಾಗಿದೆ. ಪಿಪಿಪಿ ಮಾದರಿಯಲ್ಲಿ ಅಳವಡಿಸಲಾದ ದೀಪಗಳ ದುರಸ್ತಿಯಾಗುತ್ತಿಲ್ಲ ಹಾಗೂ ಹೊಸ ದೀಪಗಳ ಅಳವಡಿಕೆಯೂ ನಡೆಯುತ್ತಿಲ್ಲ. ಮಹಾಕಾಳಿಪಡ್ಪು ರೈಲ್ವೆ ಅಂಡರ್ ಪಾಸ್ ಬಳಿಯ ಒಳಚರಂಡಿ ಕಾಮಗಾರಿ ವಿಳಂಬದಿಂದಾಗಿ ಸ್ಥಳೀಯ ಮಹಿಳೆಯರು ಅನುಭವಿಸುತ್ತಿರುವ ತೊಂದರೆಯನ್ನು ಶಾಸಕರು ಸದನದ ಗಮನಕ್ಕೆ ತಂದರು.
ಜಲಸಿರಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿಗಳು ಟ್ರಾಫಿಕ್ ಸಮಸ್ಯೆಯಿಂದಾಗಿ ವೇಗವನ್ನು ಕಂಡುಕೊಳ್ಳುತ್ತಿಲ್ಲ. ಚರಂಡಿ ಮತ್ತು ಒಳಚರಂಡಿ ವ್ಯವಸ್ಥೆಯ ಸುಧಾರಣೆಗೆ ಅಗತ್ಯವಿರುವ ಅನುದಾನದ ಕೊರತೆಯು ನಗರದ ಅಭಿವೃದ್ಧಿಗೆ ಹಿನ್ನಡೆಯನ್ನುಂಟು ಮಾಡುತ್ತಿದೆ. ಮಂಗಳೂರಿನ ನಾಗರಿಕರು ಎದುರಿಸುತ್ತಿರುವ ಈ ಸಾಲು ಸಾಲು ಸಮಸ್ಯೆಗಳನ್ನು ಸರ್ಕಾರ ಕೂಡಲೇ ಪರಿಹರಿಸಬೇಕು ಮತ್ತು ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನವನ್ನು ಬಿಡುಗಡೆ ಮಾಡಬೇಕೆಂದು ಅವರು ಈ ಸಂದರ್ಭದಲ್ಲಿ ಒತ್ತಾಯಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









