ಸುಳ್ಯ : ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗವಾದ ಸಂಪಾಜೆ ಗೇಟಿನ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿ, ಸಂಪಾಜೆ ಗೇಟಿನಿಂದ ಚೆಡಾವು ಕಡೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ರಿಕ್ಷಾಕ್ಕೆ, ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ವೇಗವಾಗಿ ಬಂದ ಕಾರೊಂದು ಹಿಂಬದಿಯಿಂದ ಬಲವಾಗಿ ಢಿಕ್ಕಿ ಹೊಡೆದಿದೆ. ಈ ರಭಸಕ್ಕೆ ರಿಕ್ಷಾ ಚಾಲಕ ರಸ್ತೆಗೆ ಎಸೆಯಲ್ಪಟ್ಟಿದ್ದು, ಅದೇ ಸಮಯದಲ್ಲಿ ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿಯ ಚಕ್ರದ ಕೆಳಗೆ ಸಿಲುಕಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ದುರಂತವೆಂದರೆ, ಅಪಘಾತ ಎಸಗಿದ ಕಾರು ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದೆ.
ಮೃತರನ್ನು ಸಂಪಾಜೆಯ ಬಿಸೆಲುಮನೆ ರಾಮಣ್ಣ ಗೌಡರ ಪುತ್ರ ಸುಂದರ್ ಚಿಟ್ಟಿಕ್ಕಾನ (56) ಎಂದು ಗುರುತಿಸಲಾಗಿದೆ. ಮೃತ ಸುಂದರ್ ಅವರು ಈ ಹಿಂದೆ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರಾಗಿ ಹಾಗೂ ಉಪಾಧ್ಯಕ್ಷರಾಗಿ ಜನಸೇವೆ ಮಾಡಿದ್ದವರು. ಸಾಮಾಜಿಕ ಕೆಲಸಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಇವರು, ಅಪಘಾತದ ಸಮಯದಲ್ಲಿ ಪಂಚಾಯತ್ ಸದಸ್ಯೆಯೊಬ್ಬರ ತಾಯಿಯಾದ ಪದ್ಮಾವತಿ ಎಂಬವರನ್ನು ಅವರ ನಿವಾಸಕ್ಕೆ ಬಿಡಲು ತೆರಳುತ್ತಿದ್ದರು. ಈ ಘಟನೆಯಲ್ಲಿ ರಿಕ್ಷಾದಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿವೆ.
ಸ್ಥಳೀಯವಾಗಿ ಜನಾನುರಾಗಿಯಾಗಿದ್ದ ಸುಂದರ್ ಚಿಟ್ಟಿಕ್ಕಾನ ಅವರ ಅಕಾಲಿಕ ನಿಧನಕ್ಕೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ. ಸದ್ಯ ಪರಾರಿಯಾಗಿರುವ ಕಾರು ಮತ್ತು ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸಾಮಾಜಿಕ ಕಳಕಳಿಯ ವ್ಯಕ್ತಿಯೊಬ್ಬರು ಇಂತಹ ಭೀಕರ ಅಪಘಾತಕ್ಕೆ ಬಲಿಯಾಗಿರುವುದು ಎಲ್ಲರಿಗೂ ತೀವ್ರ ಆಘಾತವನ್ನುಂಟು ಮಾಡಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









