ಸುರತ್ಕಲ್ : ಸಂಘ ಸಂಸ್ಥೆಗಳ ಮೂಲಕ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ಸಾಧ್ಯವಿದ್ದು, ದೇಶದ ಆರ್ಥಿಕತೆಗೆ ಇವುಗಳ ಕೊಡುಗೆ ಅತ್ಯಮೂಲ್ಯವಾಗಿದೆ ಎಂದು ಸುರತ್ಕಲ್ ಆರಕ್ಷಕ ಠಾಣೆಯ ಠಾಣಾಧಿಕಾರಿ ಪ್ರಮೋದ್ ಕುಮಾರ್ ಅಭಿಪ್ರಾಯಪಟ್ಟರು. ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಆಶ್ರಯದಲ್ಲಿ, ಶ್ರೀನಿವಾಸ್ ವಿದ್ಯಾಸಂಸ್ಥೆ ಮುಕ್ಕ, ಸುರತ್ಕಲ್ ಮತ್ತು ಮಂಗಳೂರು ಉತ್ತರ ಸಂಚಾರ ಪೊಲೀಸ್ ಠಾಣೆಗಳ ಜಂಟಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಮುಕ್ಕದಿಂದ ಬೈಕಂಪಾಡಿಯವರೆಗಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಬಸ್ ತಂಗುದಾಣಗಳ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸ್ವಚ್ಛ ಸುರತ್ಕಲ್’ ಎಂಬ ಉದಾತ್ತ ಉದ್ದೇಶದೊಂದಿಗೆ ಟ್ರಸ್ಟ್ ಹಮ್ಮಿಕೊಂಡಿರುವ ಈ ಕಾರ್ಯವನ್ನು ಶ್ಲಾಘಿಸಿದ ಠಾಣಾಧಿಕಾರಿಗಳು, ಇಂತಹ ಸಮಾಜಮುಖಿ ಕೆಲಸಗಳು ಇತರರಿಗೂ ಪ್ರೇರಣೆಯಾಗಲಿ ಎಂದರು. ಮುಂದಿನ ದಿನಗಳಲ್ಲಿ ಸುರತ್ಕಲ್ ವ್ಯಾಪ್ತಿಯ ಎಲ್ಲಾ ಬಸ್ ತಂಗುದಾಣಗಳನ್ನು ಹಂತ ಹಂತವಾಗಿ ಸ್ವಚ್ಛಗೊಳಿಸುವ ಗುರಿ ಹೊಂದಿರುವುದಾಗಿ ಅವರು ತಿಳಿಸಿದರು. ಸಾರ್ವಜನಿಕ ಸ್ಥಳಗಳ ನಿರ್ವಹಣೆಯಲ್ಲಿ ಜನಸಾಮಾನ್ಯರ ಪಾಲ್ಗೊಳ್ಳುವಿಕೆ ಅಗತ್ಯ ಎಂದು ಈ ಸಂದರ್ಭದಲ್ಲಿ ಒತ್ತಿ ಹೇಳಲಾಯಿತು.
ಕಾರ್ಯಕ್ರಮದಲ್ಲಿ ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಉಪಾಧ್ಯಕ್ಷ ನಾಗರಾಜ್ ಕಡಂಬೋಡಿ, ಕಾರ್ಯದರ್ಶಿ ಕಿರಣ್ ಆಚಾರ್ಯ ಹಾಗೂ ಶ್ರೀನಿವಾಸ ಕಾಲೇಜಿನ ಪ್ರೊಫೆಸರ್ ಆನಂದ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಸ್ವಯಂಸೇವಕರು ಹೆದ್ದಾರಿಯ ಇಕ್ಕೆಲಗಳಲ್ಲಿನ ಕಸವನ್ನು ವಿಲೇವಾರಿ ಮಾಡಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









