ಮಂಗಳೂರು : ತೊಕ್ಕೊಟ್ಟು ಚಂಬುಗುಡ್ಡೆಯ ನಿವಾಸಿ ನವೀನ್ ಸಿಕ್ವೇರಾ (52) ಎಂಬಾತನ ಮೇಲೆ 2011 ಮತ್ತು 2012ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ್ದ ಜಿಲ್ಲಾ ನ್ಯಾಯಾಲಯವು 2015ರಲ್ಲಿಯೇ ಆರೋಪಿ ತಪ್ಪಿತಸ್ಥನೆಂದು ಘೋಷಿಸಿ, ಮೂರು ವರ್ಷಗಳ ಕಠಿಣ ಕಾರಾವಾಸ ಮತ್ತು 5,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿತ್ತು.
ಉಚ್ಚ ನ್ಯಾಯಾಲಯದ ಆದೇಶ : ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದನು. ಅರ್ಜಿಯನ್ನು ಪರಿಶೀಲಿಸಿದ ಉಚ್ಚ ನ್ಯಾಯಾಲಯವು, ಶಿಕ್ಷೆಯನ್ನು ಒಂದು ವರ್ಷದ ಸಾದಾ ಕಾರಾವಾಸಕ್ಕೆ ಇಳಿಸಿ, 15,000 ರೂಪಾಯಿ ದಂಡ ವಿಧಿಸಿತ್ತು. ಅಲ್ಲದೆ, 2022ರ ಒಳಗಾಗಿ ಈ ಶಿಕ್ಷೆಯನ್ನು ಅನುಭವಿಸಬೇಕು, ತಪ್ಪಿದಲ್ಲಿ ಜಿಲ್ಲಾ ನ್ಯಾಯಾಲಯ ನೀಡಿದ್ದ ಹಳೆಯ ತೀರ್ಪಿನಂತೆಯೇ (3 ವರ್ಷ ಶಿಕ್ಷೆ) ಶಿಕ್ಷೆ ಅನುಭವಿಸಬೇಕೆಂದು ಆದೇಶಿಸಿತ್ತು.
ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ: ತೀರ್ಪು ಬಂದ ನಂತರವೂ ಶಿಕ್ಷೆಗೆ ಹಾಜರಾಗದೆ ಆರೋಪಿಯು ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಆತನ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿತ್ತು. ಕಳೆದ ಜೂನ್ 14ರಂದು ಖಚಿತ ಮಾಹಿತಿ ಪಡೆದ ಪೊಲೀಸರು ಸುರತ್ಕಲ್ನ ಹೊನ್ನಕಟ್ಟೆಯ ಬಾರ್ ಒಂದರ ಬಳಿ ಈತನನ್ನು ಬಂಧಿಸಿದ್ದಾರೆ. ಸದ್ಯ ನ್ಯಾಯಾಲಯವು ಹಳೆಯ ಆದೇಶದಂತೆ ಆತನಿಗೆ ಮೂರು ವರ್ಷಗಳ ಕಠಿಣ ಕಾರಾವಾಸದ ಶಿಕ್ಷೆಯನ್ನು ಖಾಯಂಗೊಳಿಸಿ ಜೈಲಿಗಟ್ಟಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









