ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ 66ರ ಕೋಟೆಕಾರು ಅಡ್ಕ ಎಂಬಲ್ಲಿ ಗುರುವಾರ ಮಧ್ಯಾಹ್ನ ಚಲಿಸುತ್ತಿದ್ದ ಓಮ್ನಿ ಕಾರೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಸಮಯಪ್ರಜ್ಞೆ ಮೆರೆದ ಹಿಂಬದಿ ವಾಹನ ಸವಾರನಿಂದಾಗಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಲಪಾಡಿ ನಿವಾಸಿ ರಿಯಾಝ್ ಎಂಬುವವರು ಬೆಂಕಿಯ ಕೆನ್ನಾಲಗೆಯಿಂದ ಬಚಾವಾದ ಚಾಲಕ. ತಮ್ಮ ಕಾರನ್ನು ಅಡ್ಕದ ಗ್ಯಾರೇಜ್ ಒಂದರಲ್ಲಿ ದುರಸ್ತಿ ಮಾಡಿಸಿ, ಪೆಟ್ರೋಲ್ ತುಂಬಿಸಿಕೊಂಡು ವಾಪಸ್ ತಲಪಾಡಿ ಕಡೆಗೆ ತೆರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಕಾರು ಚಲಿಸುತ್ತಿದ್ದಾಗಲೇ ಇಂಜಿನ್ ಭಾಗದಲ್ಲಿ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದ್ದರೂ, ಚಾಲಕ ರಿಯಾಝ್ ಅವರ ಗಮನಕ್ಕೆ ಇದು ಬಂದಿರಲಿಲ್ಲ. ಈ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಹಿಂದಿನಿಂದ ಬರುತ್ತಿದ್ದ ವಾಹನ ಸವಾರರೊಬ್ಬರು ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದನ್ನು ಕಂಡು ತಕ್ಷಣ ಚಾಲಕನನ್ನು ಎಚ್ಚರಿಸಿದ್ದಾರೆ. ಕೂಡಲೇ ರಿಯಾಝ್ ಅವರು ಕಾರನ್ನು ನಿಲ್ಲಿಸಿ ಕೆಳಗಿಳಿದಿದ್ದರಿಂದ ದೊಡ್ಡ ಮಟ್ಟದ ದುರಂತವೊಂದು ತಪ್ಪಿದಂತಾಗಿದೆ.
ಘಟನೆಯಿಂದಾಗಿ ಹೆದ್ದಾರಿಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಗ್ಯಾರೇಜ್ನಲ್ಲಿ ರಿಪೇರಿ ಮಾಡಿಸಿಕೊಂಡು ಬರುತ್ತಿದ್ದ ವಾಹನದಲ್ಲೇ ಇಂತಹ ತಾಂತ್ರಿಕ ದೋಷ ಕಾಣಿಸಿಕೊಂಡಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ. ಸ್ಥಳೀಯರು ಮತ್ತು ಅಗ್ನಿಶಾಮಕ ದಳದ ನೆರವಿನಿಂದ ಬೆಂಕಿಯನ್ನು ಹತೋಟಿಗೆ ತರಲಾಗಿದ್ದು, ವಾಹನವು ಬಹುತೇಕ ಜಖಂಗೊಂಡಿದೆ ಎಂದು ತಿಳಿದುಬಂದಿದೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









