ಪುತ್ತೂರು : ನಗರದ ಹೃದಯಭಾಗದಲ್ಲಿರುವ ಸರ್ಕಾರಿ ಮಹಿಳಾ ಪದವಿ ಕಾಲೇಜಿನ ವಿದ್ಯಾರ್ಥಿನಿಯರು ಇಂದು ಬೃಹತ್ ಪ್ರತಿಭಟನೆ ನಡೆಸಿದರು. ಕಾಲೇಜಿನ ಪಕ್ಕದಲ್ಲೇ ನಡೆಯುತ್ತಿರುವ ಆಸ್ಪತ್ರೆ ಕಾಮಗಾರಿಯಿಂದಾಗಿ ತರಗತಿ ಕೊಠಡಿಗಳಲ್ಲಿ ವಿಪರೀತ ಧೂಳು ತುಂಬಿಕೊಳ್ಳುತ್ತಿದ್ದು, ವಿದ್ಯಾರ್ಥಿನಿಯರು ಪಾಠ ಕೇಳಲು ಅಸಾಧ್ಯವಾದ ಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯ ಕುರಿತು ಕಾಲೇಜನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವಂತೆ ಪ್ರಾಂಶುಪಾಲರು ಈ ಹಿಂದೆಯೇ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇಂದು ಧೂಳಿನ ಪ್ರಮಾಣ ಮಿತಿಮೀರಿದ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡ ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿ ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಶಾಸಕ ಅಶೋಕ್ ಕುಮಾರ್ ರೈ ಅವರು ಆಗಮಿಸಿದಾಗ ಹೈಡ್ರಾಮಾ ನಡೆಯಿತು. ವಿದ್ಯಾರ್ಥಿನಿಯರ ಪ್ರತಿಭಟನೆಯ ಬಗ್ಗೆ ಕಾಲೇಜಿನ ಪ್ರಾಂಶುಪಾಲೆ ವೇದಶ್ರೀ ನಿತ್ಯಾ ಅವರ ಬಳಿ ಶಾಸಕರು ವಾಗ್ವಾದಕ್ಕಿಳಿದು ಆಪಾದನೆ ಮಾಡಲು ಪ್ರಯತ್ನಿಸಿದರು. ಇದರಿಂದ ಗರಂ ಆದ ಪ್ರಾಂಶುಪಾಲರು, ವಿಷಯದ ಗಂಭೀರತೆ ಅರಿಯದ ಶಾಸಕರಿಗೆ ಏರುಧ್ವನಿಯಲ್ಲೇ ಪ್ರತ್ಯುತ್ತರ ನೀಡಿದರು. “ಕಾಮಗಾರಿ ನಡೆಯುವಾಗ ಧೂಳು ಬರುತ್ತದೆ ಎಂಬ ಕನಿಷ್ಠ ಕಾಮನ್ ಸೆನ್ಸ್ ಇರಬೇಕು. ಈ ಹಿಂದೆಯೇ ಹಲವು ಬಾರಿ ನಿಮ್ಮ ಬಳಿ ಬಂದು ಹೊಸ ಕಟ್ಟಡಕ್ಕೆ ಕಾಲೇಜು ಸ್ಥಳಾಂತರಿಸುವಂತೆ ಮನವಿ ಮಾಡಿದ್ದರೂ ಏಕೆ ಕ್ರಮ ಕೈಗೊಂಡಿಲ್ಲ?” ಎಂದು ನೇರವಾಗಿಯೇ ಪ್ರಶ್ನಿಸುವ ಮೂಲಕ ಶಾಸಕರಿಗೆ ಫುಲ್ ಕ್ಲಾಸ್ ತಗೊಂಡರು.
ಪ್ರಾಂಶುಪಾಲರ ದಿಟ್ಟತನದ ಮಾತುಗಳು ಹಾಗೂ ವಿದ್ಯಾರ್ಥಿನಿಯರ ಆಕ್ರೋಶದ ಮುಂದೆ ಶಾಸಕ ಅಶೋಕ್ ಕುಮಾರ್ ರೈ ಕೆಲಕಾಲ ತಬ್ಬಿಬ್ಬಾದರು. ಶಾಸಕರ ವಿರುದ್ಧವೇ ಪ್ರಾಂಶುಪಾಲರು ಹರಿಹಾಯ್ದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಕಾಲೇಜಿನ ಮೂಲಭೂತ ಸೌಕರ್ಯ ಹಾಗೂ ಸ್ಥಳಾಂತರದ ವಿಳಂಬದ ಕುರಿತು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ಆರಂಭವಾಗಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ವಿದ್ಯಾರ್ಥಿನಿಯರಿಗೆ ನೆಮ್ಮದಿಯಿಂದ ಕಲಿಯುವ ವಾತಾವರಣ ನಿರ್ಮಿಸಿಕೊಡಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









