ಮಂಗಳೂರು : ಮುಳ್ಳೂರು ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ 169ರ ಕಾಮಗಾರಿಯಿಂದಾಗಿ ಸರ್ವಿಸ್ ರಸ್ತೆಯಲ್ಲಿ ಭಾರಿ ಬಿರುಕು ಕಾಣಿಸಿಕೊಂಡಿದ್ದು, ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ. ಹೊಸ ಹೆದ್ದಾರಿ ನಿರ್ಮಾಣದ ವೇಳೆ ಹಳೆ ರಸ್ತೆಯ ಪಕ್ಕದಲ್ಲಿ ಶಾಸ್ತ್ರೀಯವಾಗಿ ಮಣ್ಣು ಭರ್ತಿ ಮಾಡದೆ ಆಳವಾಗಿ ಅಗೆದಿರುವುದು ರಸ್ತೆ ದುರ್ಬಲಗೊಳ್ಳಲು ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ರಸ್ತೆ ಕುಸಿತದ ಭೀತಿಯಿಂದಾಗಿ ಫೆಬ್ರವರಿ 12ರಿಂದ ಮಾರ್ಚ್ 13ರವರೆಗೆ ತಾತ್ಕಾಲಿಕವಾಗಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದ್ದು, ಇದು ಎಡಪದವು ಮತ್ತು ಮಿಜಾರು ಭಾಗದ ಜನರಿಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಬಸ್ ಸಂಚಾರ ಸ್ಥಗಿತಗೊಂಡಿರುವುದರಿಂದ ಶಾಲಾ ಮಕ್ಕಳು, ವೃದ್ಧರು ಹಾಗೂ ವ್ಯಾಪಾರಿಗಳು ಕಿಲೋಮೀಟರ್ಗಟ್ಟಲೆ ನಡೆಯಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದ್ದು, ರಿಕ್ಷಾ ಬಾಡಿಗೆಗಾಗಿ ನೂರಾರು ರೂಪಾಯಿ ವ್ಯಯಿಸುವಂತಾಗಿದೆ.
ಹೆದ್ದಾರಿ ಪ್ರಾಧಿಕಾರ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿಯ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಾರ್ಗ ಬದಲಾವಣೆಯ ಕುರಿತು ಅಳವಡಿಸಲಾಗಿರುವ ಬ್ಯಾನರ್ಗಳಲ್ಲಿ ಯಾವ ಇಲಾಖೆ ಈ ಆದೇಶ ನೀಡಿದೆ ಎಂಬ ಕನಿಷ್ಠ ಮಾಹಿತಿಯೂ ಇಲ್ಲದೆ ಇರುವುದು ಗೊಂದಲಕ್ಕೆ ಕಾರಣವಾಗಿದೆ. ಬೇಸಿಗೆಯಲ್ಲೇ ರಸ್ತೆ ಬಿರುಕು ಬಿಟ್ಟಿರುವುದು ಕಾಮಗಾರಿಯ ಗುಣಮಟ್ಟವನ್ನು ಪ್ರಶ್ನಿಸುವಂತೆ ಮಾಡಿದ್ದು, ಮಳೆಗಾಲದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಆತಂಕ ಎದುರಾಗಿದೆ. ಈ ಕುರಿತು ಶಾಸಕ ಭರತ್ ಶೆಟ್ಟಿ ಅವರಿಗೆ ದೂರು ನೀಡಲಾಗಿದ್ದು, ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವಂತೆ ಆಗ್ರಹಿಸಲಾಗಿದೆ. ಸದ್ಯ ಹೊಸ ರಸ್ತೆಯ ಮೇಲಿರುವ ಮಣ್ಣು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದರೂ, ಶಾಶ್ವತ ಪರಿಹಾರಕ್ಕಾಗಿ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









