ಮಂಗಳೂರು : ಮಂಗಳೂರಿನಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ವಿಚಾರದಲ್ಲಿ ಕಾಂಗ್ರೆಸ್ ನಾಯಕರು “ಕ್ರೆಡಿಟ್ ರಾಜಕಾರಣ” ಮಾಡುತ್ತಿದ್ದಾರೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಕಿಡಿಕಾರಿದ್ದಾರೆ. ಅಟಲ್ ಸೇವಾ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶಾಸಕರನ್ನು ಕರೆದು ಸಭೆ ನಡೆಸುವ ಬದಲು, ಕೇವಲ ತಮ್ಮ ಪಕ್ಷದ ನಾಯಕರ ರಾಜಕೀಯ ಹಿತಾಸಕ್ತಿಗಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕಳೆದ ಎರಡು ಮುಕ್ಕಾಲು ವರ್ಷಗಳಿಂದ ಜಿಲ್ಲೆಯ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಚಿವರು ವಿಫಲರಾಗಿದ್ದಾರೆ ಎಂದು ಅವರು ದೂರಿದ್ದಾರೆ.
ವಿಶೇಷವಾಗಿ ಕೊಡಿಯಾಲ್ ಗುತ್ತು ವೆಟ್ವೆಲ್ನಿಂದ ಕುದ್ರೋಳಿ ವೆಟ್ವೆಲ್ಗೆ ಸಂಪರ್ಕಿಸುವ ಪಂಪಿಂಗ್ ಕೊಳವೆ ಮಾರ್ಗದ ಯೋಜನೆಯ ಕುರಿತು ಶಾಸಕರು ಸ್ಪಷ್ಟನೆ ನೀಡಿದ್ದಾರೆ. ಸುಮಾರು 25 ವರ್ಷ ಹಳೆಯದಾದ ಈ ಕೊಳವೆ ಮಾರ್ಗ ಒಡೆದು ಪರಿಸರಕ್ಕೆ ಹಾನಿಯಾಗುತ್ತಿದ್ದಾಗ, ಅಂದಿನ ಮೇಯರ್ ಸುಧೀರ್ ಶೆಟ್ಟಿ ಅವರೊಂದಿಗೆ ಸೇರಿ ತಾವು 3.47 ಕೋಟಿ ರೂ. ಮೊತ್ತದ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದಾಗಿ ತಿಳಿಸಿದರು. ಆರಂಭದಲ್ಲಿ ಜಿಲ್ಲಾಧಿಕಾರಿಗಳು ಅನುದಾನ ನೀಡಲು ನಿರಾಕರಿಸಿದಾಗ, ಸ್ಥಳೀಯ ನಿವಾಸಿಗಳೊಂದಿಗೆ ಹೋಗಿ ಮನವರಿಕೆ ಮಾಡಿಕೊಟ್ಟ ನಂತರವೇ ಈ ಯೋಜನೆಗೆ ಅನುಮೋದನೆ ದೊರೆತಿತ್ತು ಎಂದು ಅವರು ದಾಖಲೆ ಸಮೇತ ವಿವರಿಸಿದರು.
ಆದರೆ, ಈಗ ಕಾಮಗಾರಿ ಆರಂಭವಾಗುವ ಹಂತದಲ್ಲಿ ಎಂ.ಎಲ್.ಸಿ ಐವನ್ ಡಿಸೋಜಾ ಮತ್ತು ಕಾಂಗ್ರೆಸ್ ನಾಯಕರು ಅಧಿಪತಿಗಳಾಗಲು ಹೊರಟಿದ್ದಾರೆ ಎಂದು ಕಾಮತ್ ಟೀಕಿಸಿದರು. ಬಿಜೆಪಿಯ ಶ್ರಮದಿಂದ ಮಂಜೂರಾದ ಕೆಲಸವನ್ನು ಜಿಲ್ಲಾ ಉಸ್ತುವಾರಿ ಸಚಿವರ “ವಿಶೇಷ ಸ್ಥಳ ಭೇಟಿ” ಎಂಬ ನಾಟಕದ ಮೂಲಕ ತಮ್ಮದೆಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. “ಯಾರೋ ಮಾಡಿದ ಕೆಲಸಕ್ಕೆ ಫೋಟೋ ತೆಗೆಸಿಕೊಂಡು ಕ್ರೆಡಿಟ್ ಪಡೆಯುವ ಹಪಾಹಪಿ ಕಾಂಗ್ರೆಸ್ನವರಿಗೆ ಏಕಿದೆ?” ಎಂದು ಪ್ರಶ್ನಿಸಿದ ಶಾಸಕರು, ಇಂತಹ ನಡೆಯನ್ನು ಸಾರ್ವಜನಿಕರು ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದ್ದಾರೆ.
ವಿಡಿಯೋ
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ರಾಜಕೀಯ, ಟಾಪ್ ಸುದ್ದಿ, ಪ್ರಾದೇಶಿಕ ಸುದ್ದಿಗಳು, ಸುದ್ದಿಗಳು









